Thursday, April 4, 2024

ಬರವಣಿಗೆ ಹಿಂದಿನ ಬವಣೆ

     



(ಪ್ರಜಾವಾಣಿಯ ಸಂಗತ ಅಂಕಣದಲ್ಲಿ ೫.೨.೨೦೨೪ ರಂದು ಪ್ರಕ

     ಇತ್ತೀಚೆಗೆ ನನ್ನ ಸ್ನೇಹಿತರದೂ ಸೇರಿದಂತೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಪ್ರಕಾಶಕರು ತುಂಬ ಅದ್ದೂರಿಯಾಗಿ ಆಯೋಜಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಗಣ್ಯಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ  ಲೇಖಕರಿಗೆ ಹಾರ, ಫಲತಾಂಬೂಲು, ಶಾಲು ಮತ್ತು ಪುಸ್ತಕದ ಇಪ್ಪತ್ತೈದು ಪ್ರತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದವರು ತಮ್ಮ ತಮ್ಮ ಪರಿಚಯದ ಲೇಖಕರಿಂದ ಗೌರವ ಪ್ರತಿಗಳನ್ನು ಪಡೆದು ಸುಗ್ರಾಸು ಭೋಜನ ಸವಿದು ತೆರಳಿದರು. ಸಭಾಂಗಣದ ಬಾಗಿಲಬಳಿ ಮಾರಾಟಕ್ಕೆಂದು ಪ್ರದರ್ಶನಕ್ಕಿಟ್ಟಿದ್ದ ಅಂದು ಬಿಡುಗಡೆಗೊಂಡ ಪುಸ್ತಕಗಳತ್ತ ಯಾರೊಬ್ಬರೂ ಕಣ್ಣು ಹಾಯಿಸಲಿಲ್ಲ. ಪುಸ್ತಕದ ಪ್ರತಿಗಳನ್ನೇ ಲೇಖಕರು ತಮಗೆ ದೊರೆತ ಗೌರವಧನವೆಂದು ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕನ್ನಡದಲ್ಲಿ ಬರವಣಿಗೆಯಿಂದಲೇ ಬದುಕು ಕಟ್ಟಿಕೊಂಡ ಲೇಖಕರ ಸಂಖ್ಯೆ ಬಲು ವಿರಳ. ಶಿವರಾಮ ಕಾರಂತ, ಅನೃಕ, ತರಾಸು ಅಂಥವರು ಈ ಮಾತಿಗೆ ಅಪವಾದವಾಗಿರಬಹುದು. ಹಾಗೆಂದು ಅಂತಹ ಲೇಖಕರ ಸಂಖ್ಯೆ ಕನ್ನಡಿಗರು ಹೆಮ್ಮೆಪಡುವಷ್ಟೆನಿಲ್ಲ. ಇಲ್ಲಿ ಲೇಖಕ ತನ್ನ ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಪ್ರಕಾಶಕರು ಪುಸ್ತಕಗಳ ಮಾರಾಟಕ್ಕಾಗಿ ಪುಸ್ತಕ ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಓದುಗರನ್ನು ಅವಲಂಬಿಸಿರುವರು. ಶಿಕ್ಷಣ ಸಂಸ್ಥೆಗಳು ಪಠ್ಯೇತರ ಪುಸ್ತಕಗಳನ್ನು ಖರೀದಿಸುವುದು ಕಡಿಮೆ. ಪುಸ್ತಕ ವ್ಯಾಪಾರಿಗಳು ಮುಂಗಡ ಹಣ ನೀಡಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಲಾರರು. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲು ಅನೇಕ ಪಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಓದುಗರು ಪುಸ್ತಕಗಳನ್ನು ಖರೀದಿಸಿ ಓದುವ ಔದಾರ್ಯ ತೋರುತ್ತಿಲ್ಲ. ಇನ್ನು ಲೇಖಕನೇ ಪ್ರಕಾಶಕನಾಗಿ ಪುಸ್ತಕ ಪ್ರಕಟಿಸಲು ಮುಂದಾಗುವುದಾದರೆ ಪುಸ್ತಕ ಮಾರಾಟದ ವಿಭಿನ್ನ ತಂತ್ರಗಳ ಅರಿವಿರಬೇಕು. ಒಟ್ಟಿನಲ್ಲಿ ಸನ್ನಿವೇಶ ಲೇಖಕ ಗೌರವಧನವನ್ನು ಅಪೇಕ್ಷಿಸದಷ್ಟು ಪ್ರಕಾಶಕರಿಗೆ ಪೂರಕವಾಗಿದೆ.

ಕೃತಿಸ್ವಾಮ್ಯ ಕಾಯ್ದೆ ಪ್ರಕಾರ ಬೌದ್ಧಿಕಸ್ವತ್ತಿನ ಕಾನೂನಾತ್ಮಕ ಹಕ್ಕು ಲೇಖಕನಿಗೆ ಸೇರಿದ್ದು. ಕೆಲವು ಪ್ರಕಾಶಕರು ನಿಯಮಬಾಹೀರವಾಗಿ ಕೃತಿಸ್ವಾಮ್ಯವನ್ನು ತಮ್ಮದಾಗಿಸಿಕೊಳ್ಳುತ್ತಿರುವರು. ಪ್ರಕಾಶಕರು ಪುಸ್ತಕದ ಹಕ್ಕನ್ನು ತಮ್ಮದಾಗಿಸಿಕೊಳ್ಳುತ್ತಿರುವುದರ ಹಿಂದೆ ಆರ್ಥಿಕ ಲಾಭದ ಸಂಗತಿ ಅಡಕವಾಗಿದೆ. ಪುಸ್ತಕದ ಮೊದಲ ಆವೃತ್ತಿಯನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟಮಾಡುವ ಪ್ರಕಾಶಕರು ಅದರ ಎರಡನೇ ಆವೃತ್ತಿಯನ್ನೂ ಪ್ರಕಟಿಸಿ ಮಾರಾಟ ಮಾಡುವ ಉದ್ದೇಶದಿಂದ ಪುಸ್ತಕದ ಹಕ್ಕನ್ನು ತಮ್ಮದಾಗಿಸಿಕೊಳ್ಳುವರು. ಒಂದು ಪುಸ್ತಕ ಪ್ರಕಟವಾದ ಹತ್ತು ವರ್ಷಗಳ ನಂತರ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಬಹುದು ಎಂದು ನಿಯಮವೇ ಹೇಳುತ್ತದೆ. ಒಮ್ಮೆ ಪುಸ್ತಕದ ಹಕ್ಕು ಪ್ರಕಾಶಕರ ಪಾಲಾದರೆ ಆಗ ಲೇಖಕನ ಒಪ್ಪಿಗೆ ಇಲ್ಲದೆ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಲು ಯಾವ ಅಡೆತಡೆಯೂ ಎದುರಾಗದು. ಒಂದರ್ಥದಲ್ಲಿ ಪ್ರಕಾಶಕರು ಲೇಖಕರನ್ನು ಆರ್ಥಿಕವಾಗಿ ಶೋಷಣೆಗೊಳಪಡಿಸುತ್ತಿರುವರು. ಹಾಗೆಂದು ಎಲ್ಲ ಪ್ರಕಾಶಕರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ತಪ್ಪು ನಿರ್ಧಾರವಾಗುತ್ತದೆ. ಆದರೆ ಲೇಖಕರನ್ನು ಪೋಷಿಸಿ ಬೆಳೆಸುವ ಪ್ರಕಾಶಕರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಪ್ರಕಾಶಕರಿಂದ ಲೇಖಕನ ಶೋಷಣೆ ಒಂದು ಬಗೆಯಾದರೆ, ಅವನ ವೈಚಾರಿಕ ಪ್ರತಿಭೆಯನ್ನು ದಮನಗೊಳಿಸುವ ಪ್ರಭುತ್ವದ ಶೋಷಣೆ ಇನ್ನೊಂದು ಬಗೆ. ಪ್ರಭುತ್ವ ಎಂದಿಗೂ ತನ್ನನ್ನು ಪ್ರಶ್ನಿಸುವುದನ್ನು ಸಹಿಸಲಾರದು. ಬರಹಗಾರನ ವೈಚಾರಿಕ ಚಿಂತನೆಯನ್ನು ಕತ್ತುಹಿಸುಕಿ ಸಾಯಿಸುವ ಮತ್ತು ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಹುನ್ನಾರ ಕಾಲಕಾಲಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತ ಬಂದಿದೆ. ‘ಸದಾಕಾಲ ಸಮಾಜಕ್ಕೆ ಪ್ರಿಯವಾದದ್ದನ್ನೇ ಹೇಳುವುದು ಲೇಖಕನ ಕೆಲಸವಲ್ಲ. ಪ್ರತಿರೋಧದ ಮೂಲಕವೇ ನಿಜವಾದ ಸತ್ವಯುತ ಬರವಣಿಗೆ ಹೊರಹೊಮ್ಮುತ್ತದೆ. ಆದ್ದರಿಂದ ಓದುಗರನ್ನು ನಾವು ಬದುಕುತ್ತಿರುವ ಪರಿಸರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗಿಸುವ ದಿಸೆಯಲ್ಲಿ ಬರವಣಿಗೆಯು ಪ್ರತಿರೋಧದ ನಡುವೆ ಹುಟ್ಟಿಕೊಳ್ಳುವ ಸೃಜನಶೀಲ ಸೃಷ್ಟಿ ಎನ್ನುವ ನಂಬಿಕೆ ನನ್ನದು’ ಎನ್ನುತ್ತಾರೆ ಲೇಖಕ ಅಮಿತಾವ್ ಘೋಷ್.   

ತಸ್ಲಿಮಾ ನಸ್ರೀನ್, ಸಲ್ಮಾನ್ ರಶ್ದಿ, ಪೆರುಮಾಳ್ ಮುರುಗನ್, ಅರುಂಧತಿ ರಾಯ್ ಇವರೆಲ್ಲ ಪ್ರಭುತ್ವದ ದಮನಕಾರಿ ನೀತಿಗೆ ಒಳಗಾದ ಬರಹಗಾರರು. ಪೆರುಮಾಳ್ ಮುರುಗನ್ ಪ್ರಭುತ್ವದ ಶೋಷಣೆಗೆ ಬೇಸತ್ತು ಒಂದು ಹಂತದಲ್ಲಿ ತನ್ನೊಳಗಿನ ಲೇಖಕ ಸತ್ತು ಹೋದ ಇನ್ನುಮುಂದೆ ನಾನು ಬರೆಯುವುದಿಲ್ಲ ಎಂದು ಘೋಷಿಸಿಕೊಂಡರು. ತಸ್ಲಿಮಾ ನಸ್ರೀನ್ ‘ಲಜ್ಜಾ’ ಕಾದಂಬರಿ ಬರೆದು ತಮ್ಮ ದೇಶವನ್ನೇ ತ್ಯಜಿಸಿದರು. ಸಲ್ಮಾನ್ ರಶ್ದಿ ಹಲ್ಲೆಗೆ ಒಳಗಾಗಿ ಒಂದು ಕಣ್ಣು ಕಳೆದುಕೊಂಡರು. ಸಂಸ್ಕಾರ ಕಾದಂಬರಿ ಬರೆದ ಆರಂಭದ ದಿನಗಳಲ್ಲಿ ಅನಂತಮೂರ್ತಿ ಅವರು ಒಂದು ಸಮುದಾಯದ ವಿರೋಧವನ್ನು ಎದುರಿಸಬೇಕಾಯಿತು. ಸಾರಾ ಅಬೂಬಕ್ಕರ್ ಧಾರ್ಮಿಕ ಮುಖಂಡರ ಕೋಪಕ್ಕೆ ಗುರಿಯಾಗಬೇಕಾಯಿತು. 

ಪ್ರಕಾಶಕ ಮತ್ತು ಪ್ರಭುತ್ವದ ಶೋಷಣೆಯ ಜೊತೆಗೆ ಲೇಖಕ ವಿಮರ್ಶೆ ಎಂಬ ಅಗ್ನಿದಿವ್ಯವನ್ನು ಹಾಯ್ದು ಬರಬೇಕು. ಈಗ ವಿಮರ್ಶೆಗೆ ಕೊಡುಕೊಳ್ಳುವಿಕೆಯ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿದೆ. ವಿಮರ್ಶಕ ಎಂತಹ ಗಟ್ಟಿ ಸಾಹಿತ್ಯವನ್ನೂ ಪ್ರಪಾತಕ್ಕೆ ತಳ್ಳಬಹುದು ಮತ್ತು ಕೆಟ್ಟ ಸಾಹಿತ್ಯವನ್ನು ಮೇಲ್ಪಂಕ್ತಿಗೆ ತರಬಹುದು. ಈಗೀಗ ವಿಮರ್ಶೆಯಲ್ಲಿ ಜಾತಿ, ಧರ್ಮದ ವಾಸನೆ ಢಾಳಾಗಿ ಮೂಗಿಗೆ ಬಡಿಯುತ್ತಿದೆ. ಲೇಖಕನನ್ನು ವೈಚಾರಿಕವಾಗಿ ಹಣಿಯುವ ಷಡ್ಯಂತ್ರದಲ್ಲಿ ವಿಮರ್ಶಾಲೋಕದ ಪಾಲಿದೆ ಎನ್ನುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.  

ಒಟ್ಟಾರೆ ಆರ್ಥಿಕ ಶೋಷಣೆ, ಪ್ರಭುತ್ವದ ಹಿಂಸೆ ಮತ್ತು ವಿಮರ್ಶೆಯ ಕಾಕದೃಷ್ಟಿಗೆ ಲೇಖಕ ಏಕಕಾಲಕ್ಕೆ ಒಳಗಾಗುತ್ತಿರುವನು. ಈ ನಡುವೆ ಕಥೆ, ಕವಿತೆ, ಪ್ರಬಂಧ, ಪುಸ್ತಕ ಸ್ಪರ್ಧೆಗಳ ಅಖಾಡದಲ್ಲಿ ಲೇಖಕ ಪ್ರತಿಸ್ಪರ್ಧಿಗಳ ವಿರುದ್ಧ ತೊಡೆತಟ್ಟಬೇಕು. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಲಾಬಿಮಾಡುತ್ತ ಶಿಫಾರಸಿಗಾಗಿ ರಾಜಕಾರಣಿಗಳ ಹಾಗೂ ಅಧಿಕಾರಗಳ ಓಲೈಕೆಗೆ ತೊಡಗಬೇಕು. ತನ್ನ ನಡೆ, ನುಡಿಯನ್ನು ಹದ್ದಿನ ಕಣ್ಣಿನಿಂದ ಅವಲೋಕಿಸುತ್ತಿರುವ ಕುಟುಂಬ ಮತ್ತು ಸಮಾಜದ ದೃಷ್ಟಿಗೆ ಬಲಿಪಶುವಾಗಬೇಕು. ಇಂತಹ ಸನ್ನಿವೇಶದಲ್ಲಿ ನಿಜವಾದ ಸತ್ವಯುತ ಬರವಣಿಗೆ ಸೃಷ್ಟಿಯಾಗುವುದಾದರೂ ಹೇಗೆ?. ಯಶವಂತ ಚಿತ್ತಾಲರು ಹೇಳಿದಂತೆ ಲೇಖಕನ ಸೃಷ್ಟಿಕಾರ್ಯಕ್ಕೆ ಬೇಕಾದದ್ದು ‘ನಿನ್ನ ಬರವಣಿಗೆ ಬೇಕು’ ಎನ್ನುವ ಇಷಾರೆ, ‘ಬರೆಯುವುದನ್ನು ನಿಲ್ಲಿಸಬೇಡ’ ಎನ್ನುವಂಥ ಪುಸಲಾಯಿಸುವಿಕೆ. ಇಂತಹ ವಾತಾವರಣ ನಿರ್ಮಾಣವಾಗುವುದೇ ಎನ್ನುವುದು ಸಧ್ಯದ ಸಂದರ್ಭದಲ್ಲಿ ಅದೊಂದು ಯಕ್ಷಪ್ರಶ್ನೆಯಾಗಿದೆ.

-ರಾಜಕುಮಾರ ಕುಲಕರ್ಣಿ  

Thursday, March 7, 2024

ಶೈಕ್ಷಣಿಕ ಸಮ್ಮೇಳನ: ಉದ್ದೇಶ ನೇಪಥ್ಯಕ್ಕೆ?

 



(೧೮.೦೧.೨೦೨೪ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

    ಬೆಳಿಗ್ಗೆ ವಾಕಿಂಗ್ ವೇಳೆ ಎದುರಾದ ಸ್ನೇಹಿತರು ಇತ್ತೀಚೆಗೆ ತಮ್ಮ ಬೋಧನಾ ವಿಷಯದ ಸಮ್ಮೇಳನದಲ್ಲಿ ಪಾಲ್ಗೊಂಡ ಅನುಭವವನ್ನು ಹಂಚಿಕೊಂಡರು. ಮಾತಿನುದ್ದಕ್ಕೂ ತಾವು ಭೇಟಿ ನೀಡಿದ ನಗರದ ವಿಶೇಷತೆ, ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳು, ಕಡಲ ಕಿನಾರೆ, ಅಲ್ಲಿನ ಜನಪ್ರಿಯ ತಿಂಡಿ ತಿನುಸುಗಳು ಮತ್ತು  ದೇವಸ್ಥಾನಗಳ ಕುರಿತು ತುಂಬ ಆಸಕ್ತಿಯಿಂದ ಹೇಳಿದರು. ಸಮ್ಮೇಳನದಲ್ಲಿನ ಚರ್ಚೆ, ಸಂವಾದ, ಗೋಷ್ಠಿಗಳ ಕುರಿತು ಏನನ್ನು ಹೇಳಲಿಲ್ಲ. ನಾನೇ ಮುಂದಾಗಿ ವಿಚಾರಿಸಿದಾಗ, ‘ಅಯ್ಯೋ ಅದೇನು ಹೇಳಿಕೊಳ್ಳುವಂತಹದ್ದಲ್ಲ. ಸಮ್ಮೇಳನಕ್ಕೆ ಬಂದವರಲ್ಲಿ ಹೆಚ್ಚಿನವರು ಪ್ರವಾಸಕ್ಕೆಂದೇ ಬಂದಿದ್ದರು. ಕೆಲವರು  ಕುಟುಂಬಸಮೇತರಾಗಿ ಬಂದು ಮೋಜು ಮಸ್ತಿ ಮಾಡಿದರು’ ಎಂದು ನುಡಿದರು.  

ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ವಿಫಲವಾಗುತ್ತಿರುವುದಕ್ಕೆ ಪ್ರತಿನಿಧಿಗಳು ತಮ್ಮ ಪೂರ್ಣ ಸಮಯವನ್ನು ಸಮ್ಮೇಳನದ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿಲ್ಲದಿರುವುದೇ ಕಾರಣವಾಗಿದೆ. ಆಯೋಜಕರು ಕೂಡ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಬೇಕೆಂದು ಹಾಜರಾತಿಯಲ್ಲಿ ವಿನಾಯಿತಿ ಕೊಡುವುದರಿಂದ ಸಮ್ಮೇಳನಗಳು ಪ್ರವಾಸ ಕೇಂದ್ರಿತವಾಗುತ್ತಿವೆ. ಸಾಮಾನ್ಯವಾಗಿ ಸಮ್ಮೇಳನಗಳ ಆಯೋಜಕರು ಪ್ರತಿನಿಧಿಗಳಿಗೆ ಕುಟುಂಬದ ಸದಸ್ಯರನ್ನು ಜೊತೆಗೆ ಕರೆತರಲು ಅವಕಾಶಕೊಡುವುದುಂಟು. ಇಂಥ ಸಂದರ್ಭಗಳಲ್ಲಿ ಪ್ರತಿನಿಧಿಗಳು ಹೆಚ್ಚುವರಿ ಶುಲ್ಕ ಪಾವತಿಸಿ ತಮ್ಮೊಂದಿಗೆ ಪತ್ನಿ ಮತ್ತು ಮಕ್ಕಳನ್ನು ಕರೆದೊಯ್ಯುವರು. ಹೀಗೆ ಕುಟುಂಬಸಮೇತರಾಗಿ ಸಮ್ಮೇಳನಗಳಿಗೆ ಆಗಮಿಸುವವರು ತಮ್ಮ ಸಂಪೂರ್ಣ ಸಮಯವನ್ನು ಸಮ್ಮೇಳನದ ಕಾರ್ಯಕಲಾಪಗಳಿಗೆ ಮೀಸಲಾಗಿಡುವುದಿಲ್ಲ. ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿ ಕೊನೆಯ ದಿನ ವೇದಿಕೆಯಲ್ಲಿ ಪ್ರಮಾಣಪತ್ರವನ್ನು ಸ್ವೀಕರಿಸುವುದರೊಂದಿಗೆ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳ ಉದ್ದೇಶ ಸಫಲಗೊಳ್ಳುತ್ತದೆ.   

ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಭಾರತೀಯ ತಾಂತ್ರಿಕ ಶಿಕ್ಷಣ ಆಯೋಗದಂಥ ಉನ್ನತ ಶಿಕ್ಷಣ ಸಮಿತಿಗಳು ಬೋಧಕರು ಸಮ್ಮೇಳನಗಳಲ್ಲಿ ಭಾಗವಹಿಸುವುದನ್ನು ಮತ್ತು ಸಂಶೋಧನಾ ಲೇಖನ ಮಂಡಿಸುವುದನ್ನು ಕಡ್ಡಾಯಗೊಳಿಸಿವೆ. ವೇತನ ಬಡ್ತಿ ಮತ್ತು ಹುದ್ದೆಯ ಬಡ್ತಿಗೆ ಸಂಬಂಧಿಸಿದಂತೆ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಇದನ್ನೊಂದು ಅನಿವಾರ್ಯ ನಿಯಮವೆನ್ನುವಂತೆ ಪಾಲಿಸುತ್ತಾರೆಯೇ ವಿನಾ ಸ್ವಯಂ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುವುದು ತುಂಬಾ ವಿರಳ. ಇನ್ನು ವೃತ್ತಿನಿರತರ ಸಂಘಗಳು ಆಯೋಜಿಸುವ ಸಮ್ಮೇಳನಗಳು ಜಗಳ, ಕಿರುಚಾಟ, ಪರಸ್ಪರ ನಿಂದನೆಗಳಲ್ಲಿ ಕೊನೆಗೊಳ್ಳುವುದೇ ಹೆಚ್ಚು. ಸಮ್ಮೇಳನದ ಮೊದಲದಿನ ಮಾತ್ರ ಒಂದಿಷ್ಟು ಶೈಕ್ಷಣಿಕ ವಾತಾವರಣ ನೆಲೆಗೊಂಡಿರುತ್ತದೆ. ಕೊನೆಯ ದಿನ ತಮ್ಮ ವೃತ್ತಿ ಸಂಬಂಧಿತ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಆಯ್ಕೆ ಹಾಗೂ ನೇಮಕಾತಿಯ ಪ್ರಕ್ರಿಯೆಗೆ ಸಂಪೂರ್ಣ ಸಮಯ ಮೀಸಲಾಗಿರುವುದು. ವರ್ಷದ ಖರ್ಚು-ವೆಚ್ಚದ ವರದಿ ಓದುವ ಸಂದರ್ಭ ಸಮ್ಮೇಳನದ ವೇದಿಕೆ ಅಕ್ಷರಶ: ರಣಾಂಗಣದ ರೂಪುತಳೆಯುತ್ತದೆ. ಸದಸ್ಯರು ಮತ್ತು ಪದಾಧಿಕಾರಿಗಳ ನಡುವೆ ವಾಗ್ವಾದ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ವಿಕೋಪಗೊಂಡು ಸಮ್ಮೇಳನದ ಮೂಲ ಉದ್ದೇಶವೇ ಮೂಲೆಗುಂಪಾಗುತ್ತದೆ.

ಪುಸ್ತಕ ಪ್ರಕಾಶಕರು ಮತ್ತು ಶೈಕ್ಷಣಿಕ ಸಾಮಗ್ರಿಗಳ ಉತ್ಪಾದಕರು ತಮ್ಮ ಉತ್ಪಾದನೆಯ ಪ್ರಚಾರಕ್ಕಾಗಿ ಸಮ್ಮೇಳನಗಳಿಗೆ ಸಂಬಂಧಿಸಿದಂತೆ ಪ್ರಾಯೋಜಕರಾಗಿ ವ್ಯವಹರಿಸುವುದುಂಟು. ಸಮ್ಮೇಳನದ ನೋಂದಣಿ ಶುಲ್ಕ ಸೇರಿದಂತೆ ಪಾಲ್ಗೊಳ್ಳಲು ತಗಲುವ ಇಡೀ ವೆಚ್ಚವನ್ನು ಪ್ರಾಯೋಜಕರು ಭರಿಸುವುದರಿಂದ ಶಿಕ್ಷಕರು ಮತ್ತು ಸಂಶೋಧಕರು ಇದರ ಲಾಭ ಪಡೆದು ಧನ್ಯರಾಗುವರು. ಕೆಲವೊಮ್ಮೆ ಈ ಉಚಿತ ಪ್ರಾಯೋಜಕತ್ವದಿಂದ ವಿದೇಶಗಳಿಗೂ ಪಯಣಿಸುವ ಭಾಗ್ಯ ಪ್ರಾಪ್ತವಾಗುವುದುಂಟು. ಒಟ್ಟಾರೆ ಉಚಿತ ಪ್ರಾಯೋಜಕತ್ವದ ಪರಿಣಾಮ ಶೈಕ್ಷಣಿಕ ಆಸಕ್ತಿ ಹಿನ್ನೆಲೆಗೆ ಸರಿದು ಪ್ರವಾಸದ ಉಮೇದು ಮುನ್ನೆಲೆಗೆ ಬರುತ್ತದೆ.  

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಪದವಿ ಕಾಲೇಜುಗಳಲ್ಲಿ ಶೈಕ್ಷಣಿಯ ಗುಣಮಟ್ಟದ ಸುಧಾರಣೆಗಾಗಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಪ್ರತಿವರ್ಷ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಸಮ್ಮೇಳನಗಳ ಆಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಉಪನ್ಯಾಸಕರು ವರ್ಷದಲ್ಲಿ ನಿರ್ಧಿಷ್ಟ ಸಂಖ್ಯೆಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಮತ್ತು ಸಂಶೋಧನಾ ಲೇಖನ ಮಂಡಿಸುವುದು ಅಗತ್ಯವಾಗಿದೆ. ಪರಿಣಾಮವಾಗಿ ಮಂಡಳಿಯ ನಿಯಮಗಳನ್ನು ಅನುಸರಿಸುವ ಒತ್ತಡದಲ್ಲಿ ಸಮ್ಮೇಳನಗಳ ಆಯೋಜನೆ ಮತ್ತು ಪಾಲ್ಗೊಳ್ಳುವಿಕೆಯು ಅನಿವಾರ್ಯ ಎನ್ನುವಂತಾಗಿರುವುದು ದುರ್ದೈವದ ಸಂಗತಿ. ಈ ನಡುವೆ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುವ ವ್ಯಾಮೋಹ ಈಗ ಸೋಂಕಿನಂತೆ ವ್ಯಾಪಕವಾಗಿ ವಿಸ್ತರಿಸುತ್ತಿದೆ. ನ್ಯಾಕ್ ನಿಯಮಗಳ ಪ್ರಕಾರ ಅಂತರರಾಷ್ಟ್ರೀಯ ಸಮ್ಮೇಳನದ ಆಯೋಜನೆಗೆ ಹೆಚ್ಚು ಅಂಕಗಳು ಲಭ್ಯವಾಗುವುದೆ ಈ ವ್ಯಾಮೋಹಕ್ಕೆ ಕಾರಣವಾಗಿದೆ. ನೆರೆಯ ಶ್ರೀಲಂಕಾ, ನೇಪಾಳ, ಸಿಂಗಪೂರ್‍ನಿಂದ ಒಂದೆರಡು ಪ್ರತಿನಿಧಿಗಳು ಭಾಗವಹಿಸಿದರೂ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಪ್ರಾಪ್ತವಾಗುತ್ತದೆ. ಪರಿಣಾಮವಾಗಿ ಜಿಲ್ಲಾಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊಬಳಿಯಂಥ ಸಣ್ಣ ಊರುಗಳಲ್ಲಿರುವ ಪದವಿ ಕಾಲೇಜುಗಳಲ್ಲಿ ಕೂಡ ಈಗ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಶೈಕ್ಷಣಿಕ ಸಮ್ಮೇಳನಗಳನ್ನು ಆನ್‍ಲೈನ್ ಮೂಲಕ ಆಯೋಜಿಸಲಾಯಿತು. ವೆಬಿನಾರ್ ಪದ ಪ್ರಾಥಮಿಕ ಶಾಲಾ ಮಕ್ಕಳಿಗೂ ಪರಿಚಿತವಾಗುವಷ್ಟು ವ್ಯಾಪಕವಾಗಿ ಆನ್‍ಲೈನ್ ಮೂಲಕ ಶೈಕ್ಷಣಿಕ ಸಮ್ಮೇಳನಗಳು ಆಯೋಜನೆಗೊಂಡವು. ಪ್ರತಿನಿಧಿಗಳಿಗೂ ನೋಂದಣಿ ಶುಲ್ಕ ಹಾಗೂ ಮತ್ತಿತರ ಖರ್ಚುಗಳಿಲ್ಲದೆ ಇರುವುದರಿಂದ ಬಹಳ ಉಮೇದಿಯಿಂದಲೇ ಈ ವೆಬಿನಾರ್‍ಗಳಲ್ಲಿ ಪಾಲ್ಗೊಂಡರು. ಕೆಲವೊಮ್ಮೆ ಏಕಕಾಲಕ್ಕೆ ಎರಡು ಅಥವಾ ಮೂರು ವೆಬಿನಾರ್‍ಗಳಲ್ಲಿ ಪಾಲ್ಗೊಂಡು ಪ್ರಮಾಣಪತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರೆ ವಿನಾ ಶೈಕ್ಷಣಿಕವಾಗಿ ಯಾವ ಉನ್ನತಿಯನ್ನೂ ಸಾಧಿಸಲಿಲ್ಲ.

‘ಈ ನೆಲದ ಮೇಲಿನ ಅತಿದೊಡ್ಡ ಕಸವೆಂದರೆ ಪ್ರಶ್ನಿಸುವ ಸಾಮರ್ಥ್ಯವನ್ನು ಕಳೆದುಕೊಂಡ ಮೆದುಳು’ ಎಂದಿರುವರು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್. ಪ್ರಶ್ನೆ, ಚರ್ಚೆ, ಸಂವಾದದ ಮೂಲಕವೇ ಹೊಸ ಚಿಂತನೆಗಳು ಮತ್ತು ಸಾಧ್ಯತೆಗಳು ಹುಟ್ಟುವವು. ವಿಪರ್ಯಾಸವೆಂದರೆ ಚರ್ಚೆ ಮತ್ತು ಸಂವಾದ ಇಂದಿನ ಬಹುಪಾಲು ಶೈಕ್ಷಣಿಕ ಸಮ್ಮೇಳನಗಳಲ್ಲಿ ಗೋಚರಿಸುತ್ತಿಲ್ಲ. ಹೊಸ ಹೊಳಹುಗಳು ಮತ್ತು ಚಿಂತನೆಗಳು ಸಮ್ಮೇಳನಗಳ ಫಲಶ್ರುತಿಯಾಗಬೇಕು. ಆಗಮಾತ್ರ ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ಸಾಕಾರಗೊಂಡು ಅವುಗಳಿಗೆ ಒಂದು ಘನತೆ ಮತ್ತು ಅರ್ಥ ಪ್ರಾಪ್ತವಾಗುತ್ತದೆ.

-ರಾಜಕುಮಾರ ಕುಲಕರ್ಣಿ

Sunday, February 4, 2024

ಲಯ ತಪ್ಪಿದ ವಿಶ್ವವಿದ್ಯಾಲಯ

  




(೧೯.೧೨.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

   ‘ಪ್ರಪಾತಕ್ಕೆ ಸರ್ಕಾರಿ ವಿಶ್ವವಿದ್ಯಾಲಯಗಳು’ ವಿಶೇಷ ವರದಿ (ಪ್ರ.ವಾ., ಡಿ. 10) ವಿಶ್ವವಿದ್ಯಾಲಯಗಳ ದುಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅನುದಾನದ ಕೊರತೆ, ಹಣಕಾಸಿನ ದುರ್ಬಳಕೆ, ಸರ್ಕಾರದ ಹಸ್ತಕ್ಷೇಪ ಇತ್ಯಾದಿ ಸಮಸ್ಯೆಗಳು ವಿಶ್ವವಿದ್ಯಾಲಯಗಳನ್ನು ಪ್ರಪಾತಕ್ಕೆ ತಳ್ಳಿವೆ. ಇಂಥ ಸನ್ನಿವೇಶದಲ್ಲಿ ಗುಣಮಟ್ಟದ ಸಂಶೋಧನೆ ಮತ್ತು ದಕ್ಷ, ಪ್ರಾಮಾಣಿಕ ಹಾಗೂ ಸಾಮಾಜಿಕ ಕಾಳಜಿಯುಳ್ಳ ಭವಿಷ್ಯದ ನೇತಾರರನ್ನು ರೂಪಿಸುವಂತಹ ಮಹತ್ವದ ಜವಾಬ್ದಾರಿಯನ್ನು ವಿವಿಗಳು ನಿರ್ವಹಿಸುವುದಾದರೂ ಹೇಗೆ?. ಈ ಎರಡು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ವಿಶ್ವವಿದ್ಯಾಲಯ ಸಹಜವಾಗಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ವಿಶ್ವವಿದ್ಯಾಲಯಗಳೆಂದು ಆಯ್ಕೆಯಾಗುವ ಬಹುತೇಕ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಭವಿಷ್ಯದ ನೇತಾರರ ತಯ್ಯಾರಿಗೆ ಹೆಚ್ಚು ಒತ್ತು ಕೊಡುವುದನ್ನು ಕಾಣಬಹುದು. 

ನಾನು ಸ್ನಾತಕೋತ್ತರ ಪದವಿ ಪಡೆದ ವಿಶ್ವವಿದ್ಯಾಲಯದ ವಿಭಾಗಕ್ಕೆ ಕೆಲವು ದಿನಗಳ ಹಿಂದೆ ಭೇಟಿ ನೀಡುವ ಸಂದರ್ಭ ಎದುರಾಯಿತು. ಒಂದು ಕಾಲದಲ್ಲಿ ಏಳೆಂಟು ಜನ ಪೂರ್ಣಕಾಲಿಕ ಬೋಧಕರು ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ವಿಭಾಗದಲ್ಲಿ ಇಂದು ಪೂರ್ಣಕಾಲಿಕ ಬೋಧಕರ ಸಂಖ್ಯೆ ಸೊನ್ನೆ. ಅರೆಕಾಲಿಕ ಉಪನ್ಯಾಸಕರಿಂದ ಸ್ನಾತಕೋತ್ತರ ಕೋರ್ಸಿನ ಎರಡು ತರಗತಿಗಳ ಪಾಠ ಪ್ರವಚನ ನಿರ್ವಹಿಸಬೇಕಾದ ಸನ್ನಿವೇಶ ಎದುರಾಗಿದೆ. ಪೂರ್ಣಕಾಲಿಕ ಬೋಧಕರಿಲ್ಲದ ಕಾರಣ ಸಂಶೋಧನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪರಿಣಾಮವಾಗಿ ಶೈಕ್ಷಣಿಕ ಗುಣಮಟ್ಟ ಇಳಿಮುಖವಾಗಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿರುವರು. 

ಇದು ಕೇವಲ ಒಂದು ವಿಶ್ವವಿದ್ಯಾಲಯದ ಚಿತ್ರಣವಲ್ಲ. ರಾಜ್ಯದ ಬಹಳಷ್ಟು ವಿಶ್ವವಿದ್ಯಾಲಯಗಳು ಇಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿವೆ. ಅನೇಕ ವಿಭಾಗಗಳಲ್ಲಿ ಪೂರ್ಣಕಾಲಿಕ ಬೋಧಕರಿಲ್ಲದೆ ಅರೆಕಾಲಿಕ ಬೋಧಕರನ್ನು ನೆಚ್ಚಿಕೂಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಿಶ್ವವಿದ್ಯಾಲಯಗಳ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಯಾಗುತ್ತಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆ. ಕೆಲವು ವಿಶ್ವವಿದ್ಯಾಲಯಗಳು ಕಟ್ಟಡ ಮತ್ತು ಅಗತ್ಯದ ಪೀಠೋಪಕರಣಗಳಿಲ್ಲದೆ ಮುಚ್ಚಬೇಕಾದ ಸ್ಥಿತಿಗೆ ಬಂದು ನಿಂತಿವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳಲ್ಲಿನ ಸಮಸ್ಯೆಗಳೇ ಬೆಟ್ಟದಷ್ಟಿರುವಾಗ ಇನ್ನು ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವುದು ಆತುರದ ನಿರ್ಧಾರವಾಗುತ್ತದೆ. ವೃತ್ತಿಪರ ಕೋರ್ಸುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದರಿಂದ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕೋರ್ಸುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಸಂದರ್ಭ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಸರಿಯಲ್ಲ. ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬದಲು ಈಗ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳನ್ನು ಬಲಪಡಿಸಬೇಕಾದದ್ದು ಅಗತ್ಯವಾಗಿದೆ. ಹೊಸ ವಿವಿಗಳ ಸ್ಥಾಪನೆ ಸಧ್ಯಕ್ಕಿಲ್ಲ ಎಂದಿರುವ ಉನ್ನತ ಶಿಕ್ಷಣ ಸಚಿವರ ನಿರ್ಧಾರ ಸ್ವಾಗತಾರ್ಹ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಎನ್ನುವುದು ನಿಂತ ನೀರಾಗಿದೆ. ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆಯು ಎದ್ದು ಕಾಣುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ನಾತಕೋತ್ತರ ಸಂಶೋಧನಾ ಪ್ರಬಂಧದ (ಥೀಸಿಸ್) ಬರವಣಿಗೆ ಸಂಬಂಧಿತ ಶೀರ್ಷಿಕೆಗಳ ಪಟ್ಟಿಯನ್ನು ತಯ್ಯಾರಿಸಿದೆ. 24 ವೈದ್ಯಕೀಯ ವಿಷಯಗಳಿಗೆ ಸಂಬಂಧಪಟ್ಟ ಸುಮಾರು 1400 ಕ್ಕಿಂತ ಹೆಚ್ಚು ಶೀರ್ಷಿಕೆಗಳು ಈ ಪಟ್ಟಿಯಲ್ಲಿವೆ. ಪ್ರಸ್ತುತ ವೈದ್ಯಕೀಯ ವಿದ್ಯಾರ್ಥಿಗಳು ಆಯ್ಕೆಮಾಡಿಕೊಳ್ಳುತ್ತಿರುವ ಸಂಶೋಧನಾ ಶೀರ್ಷಿಕೆಗಳು ಗುಣಮಟ್ಟದ್ದಾಗಿಲ್ಲ ಎನ್ನುವ ಕಾರಣದಿಂದ ಆಯೋಗವೇ ಮುಂದಾಗಿ ಶೀರ್ಷಿಕೆಗಳನ್ನು ತಯ್ಯಾರಿಸಿದೆ. ಈ ಮಾತು ಬರೀ ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗೆ ಮಾತ್ರವಲ್ಲ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಒಟ್ಟಾರೆ ವೇತನ ಬಡ್ತಿ ಮತ್ತು ಉದ್ಯೋಗ ಬಡ್ತಿ ಸಂಶೋಧನೆಯ ಮೊದಲ ಆದ್ಯತೆಯಾಗಿದೆ. ಒಮ್ಮೆ ಸಂಶೋಧನೆ ಪೂರ್ಣಗೊಳಿಸಿ ಡಾಕ್ಟರೇಟ್ ಪದವಿ ಪಡೆದವರು ಮತ್ತೆ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ವಿರಳ.

ಭವಿಷ್ಯದ ನೇತಾರರನ್ನು ರೂಪಿಸುವ ಜವಾಬ್ದಾರಿಯಲ್ಲೂ ವಿಶ್ವವಿದ್ಯಾಲಯಗಳು ಎಡವುತ್ತಿವೆ. ಸಂವಾದ, ಚರ್ಚೆ, ಗೋಷ್ಠಿಗಳಿಗೆ ಮುಕ್ತವೇದಿಕೆಯಾಗಬೇಕಾದ ವಿಶ್ವವಿದ್ಯಾಲಯಗಳು ಆಳುವ ಸರ್ಕಾರಗಳ ಕೈಗೊಂಬೆಯಂತೆ ವರ್ತಿಸುತ್ತಿವೆ. ಚರ್ಚೆ ಮತ್ತು ಸಂವಾದಗಳು ಆಳುವ ಸರ್ಕಾರಗಳ ಮುಖಸ್ತುತಿಗೆ ಸೀಮಿತವಾಗುತ್ತಿವೆ. ಕಾಲಕಾಲಕ್ಕೆ ಅಸ್ತಿತ್ವಕ್ಕೆ ಬರುವ ಸರ್ಕಾರಗಳ ಚಹರೆ ಅಥವಾ ಮುಖವಾಡ ವಿಶ್ವವಿದ್ಯಾಲಯಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ಆಯಾ ಸರ್ಕಾರಗಳು ತಮ್ಮ ಸೈದ್ಧಾಂತಿಕ ನೆಲೆಯನ್ನು ವಿಸ್ತರಿಸಲು ವಿಶ್ವವಿದ್ಯಾಲಯಗಳನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿವೆ. ಇದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳ ಆಯಕಟ್ಟಿನ ಸ್ಥಾನಗಳನ್ನು ಕಾಲಕಾಲಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ರಾಜಕೀಯ ಪಕ್ಷಗಳ ಹಿಂಬಾಲಕರು ಆಕ್ರಮಿಸಿಕೊಳ್ಳುತ್ತಿರುವರು. ಕೆಲವು ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಪೈಪೆÇೀಟಿ ಏರ್ಪಟ್ಟಿದೆ. ಇದು ಆರೋಗ್ಯಕರ ಬೆಳೆವಣಿಗೆಯಲ್ಲ. ಇಂಥ ಸನ್ನಿವೇಶದಲ್ಲಿ ದಕ್ಷ, ಪ್ರಾಮಾಣಿಕ ಮತ್ತು ಸಾಮಾಜಿಕ ಕಳಕಳಿಯುಳ್ಳ ಭವಿಷ್ಯದ ನೇತಾರರನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ. 

ವಿಶ್ವವಿದ್ಯಾಲಯಗಳನ್ನು ಆವರಿಸಿಕೊಂಡಿರುವ ಜಡತ್ವದಲ್ಲಿ ಬೋಧಕರ ಪಾತ್ರವನ್ನು ಕೂಡ ಕಡೆಗಣಿಸುವಂತಿಲ್ಲ. ಪಾಠ ಮತ್ತು ಸಂಶೋಧನೆಗಿಂತ ಸೆನೆಟ್, ಸಿಂಡಿಕೇಟ್‍ಗಳ ಚುನಾವಣೆ ಹಾಗೂ ಉನ್ನತ ಹುದ್ದೆಗಳ ಲಾಬಿಗಾಗಿ ಸರ್ಕಾರದ ಓಲೈಕೆಯಲ್ಲಿ ಬೋಧಕರ ಹೆಚ್ಚಿನ ಸಮಯ ವಿನಿಯೋಗವಾಗುತ್ತಿದೆ. ಜಾತಿ ಮತ್ತು ಧರ್ಮ ವಿಶ್ವವಿದ್ಯಾಲಯದ ಬೋಧಕ ಹಾಗೂ ವಿದ್ಯಾರ್ಥಿ ಗಣವನ್ನು ವ್ಯವಸ್ಥಿತವಾಗಿ ವಿಭಾಗಿಸುತ್ತಿವೆ. ಅಧ್ಯಾಪಕರು ವಿಶ್ವಮಾನವ ಪ್ರಜ್ಞೆಯ ಭವಿಷ್ಯದ ನೇತಾರರನ್ನು ರೂಪಿಸುವ ಬದಲು ಜಾತಿ ಮತ್ತು ಧರ್ಮಗಳ ಚೌಕಟ್ಟಿಗೆ ಸೀಮಿತಗೊಳ್ಳುತ್ತಿರುವ ಸಂಕುಚಿತ ಮನಸ್ಸಿನ ನಾಗರಿಕರನ್ನು ಸೃಷ್ಟಿಸುತ್ತಿರುವರು.

ಪ್ರಸ್ತುತ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಭ್ರಷ್ಟಾಚಾರ ಮುಕ್ತಗೊಳಿಸುವುದು, ಆವರಿಕೊಂಡಿರುವ ಪ್ರಭುತ್ವದ ಚಹರೆಯನ್ನು ತೆಗೆದುಹಾಕುವುದು, ಬೋಧಕಗಣವನ್ನು ಜಾತಿ-ಧರ್ಮದ ಸಂಕೋಲೆಯಿಂದ ಹೊರತರುವುದು ಮತ್ತು ಬೋಧನೆ ಹಾಗೂ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ. ವಿಶ್ವವಿದ್ಯಾಲಯಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ತೊಡಗಿದಾಗ ಸಂಶೋಧನೆಯ ಗುಣಮಟ್ಟ ಹೆಚ್ಚುತ್ತದೆ ಮತ್ತು ಭವಿಷ್ಯದ ಪ್ರಜ್ಞಾವಂತ ನೇತಾರರು ರೂಪುಗೊಳ್ಳುತ್ತಾರೆ. ಸಧ್ಯದ ನಿರೀಕ್ಷೆ ಕೂಡ ಇದೇ ಆಗಿದೆ.

-ರಾಜಕುಮಾರ ಕುಲಕರ್ಣಿ


Tuesday, January 23, 2024

ಗ್ರಂಥಾಲಯ ಸಪ್ತಾಹ: ನಿತ್ಯದ ಹಬ್ಬವಾಗಲಿ


       

(೧೭.೧೧.೨೦೨೩ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

     ಪ್ರತಿವರ್ಷ ನವೆಂಬರ್ 14 ರಿಂದ 20 ರ ವರೆಗೆ ಭಾರತದಲ್ಲಿ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ವನ್ನು ಆಚರಿಸಲಾಗುತ್ತದೆ. ವಾರಪೂರ್ತಿ ಪುಸ್ತಕ ಪ್ರದರ್ಶನ, ವಿಶೇಷ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳನ್ನು ಗ್ರಂಥಾಲಯಗಳಲ್ಲಿ ಆಯೋಜಿಸಲಾಗುವುದು. ಗ್ರಂಥಾಲಯ ಸಪ್ತಾಹ ಆಚರಿಸುವುದರ ಮೂಲಕ ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿಕೊಡಲಾಗುವುದು. ವಿಶೇಷವಾಗಿ ಗ್ರಂಥಾಲಯ ಸಪ್ತಾಹದ ಆಚರಣೆಗೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ತುಂಬ ಮಹತ್ವವಿದೆ. ವಿವಿಧ ವಯೋಮಾನದ ಮತ್ತು ಹಿನ್ನೆಲೆಯ ಓದುಗರು ಭೇಟಿನೀಡುವ ತಾಣ ಸಾರ್ವಜನಿಕ ಗ್ರಂಥಾಲಯಗಳಾಗಿವೆ. ಅಗತ್ಯದ ಪುಸ್ತಕಗಳನ್ನು ವೈಯಕ್ತಿಕವಾಗಿ ಖರೀದಿಸಿ ಓದುವುದು ಆರ್ಥಿಕವಾಗಿ ಕಷ್ಟಸಾಧ್ಯವಾದ ಕೆಲಸ. ಅದಕ್ಕೆಂದೆ ಓದುಗರ ಅಭಿರುಚಿ ಮತ್ತು ಅಗತ್ಯಕ್ಕನುಗುಣವಾಗಿ ಪುಸ್ತಕಗಳು ದೊರೆಯುವ ವ್ಯವಸ್ಥೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಮಾಡಲಾಗಿದೆ. ಜನರಲ್ಲಿ ಓದಿನಂತಹ ಸುಸಂಸ್ಕೃತ ಹವ್ಯಾಸವನ್ನು ಬೆಳೆಸುವ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಮತ್ತು ಸೇವೆ ಪ್ರಶಂಸಾರ್ಹವಾಗಿದೆ. 

ಸಾರ್ವಜನಿಕ ಗ್ರಂಥಾಲಯಗಳನ್ನು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಪರಿಗಣಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯಗಳ ಮಹತ್ವವನ್ನರಿತು ಅವುಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಭಾರತದಲ್ಲಿ ಗ್ರಂಥಾಲಯ ಕಾಯ್ದೆಯನ್ನು ರಚಿಸಲಾಯಿತು. ಕರ್ನಾಟಕದಲ್ಲಿ 1965 ರಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಈ ಕಾಯ್ದೆಯಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗುವ ಆಸ್ತಿ ತೆರಿಗೆ ಹಣದಲ್ಲಿ ಶೇಕಡಾ 6 ರಷ್ಟನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗಾಗಿ ಖರ್ಚು ಮಾಡಬೇಕೆಂದು ಉಲ್ಲೇಖಿಸಲಾಗಿದೆ. ಇಂದು ಭಾರತದ ಎಲ್ಲ ರಾಜ್ಯಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಬಳಕೆಯಲ್ಲಿದೆ.

ಸಾರ್ವಜನಿಕರ ಓದಿನ ಹವ್ಯಾಸಕ್ಕೆ ಅಗತ್ಯವಾದ ಒಂದು ಪೂರಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಸ್ಥಾಪನೆಯಾದ ಸಾರ್ವಜನಿಕ ಗ್ರಂಥಾಲಯಗಳು ಇಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಕೆಲವು ದಶಕಗಳ ಹಿಂದಿನ ಗ್ರಂಥಾಲಯಗಳ ಭೌತಿಕ ಚಿತ್ರಣದೊಂದಿಗೆ ಹೋಲಿಸಿದರೆ ಇಂದು ಕಟ್ಟಡ ಮತ್ತು ಪೀಠೋಪಕರಣಗಳು ಆಧುನೀಕರಣಗೊಂಡಿರುವುದು ಕಣ್ಣಿಗೆ ಢಾಳಾಗಿ ಗೋಚರಿಸುತ್ತದೆ. ಗ್ರಂಥಾಲಯಗಳಿಗೆ ಕಂಪ್ಯೂಟರ್‍ಗಳನ್ನು ಮತ್ತು ಇಂಟರ್‍ನೆಟ್ ಸೌಲಭ್ಯ ಕೂಡ ಒದಗಿಸಲಾಗಿದೆ. ವಿಪರ್ಯಾಸದ ಸಂಗತಿ ಎಂದರೆ ಓದುಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ಗ್ರಂಥಾಲಯಗಳಲ್ಲಿ ಗುಣಾತ್ಮಕ ಪುಸ್ತಕಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದೇ ಕಾರಣ ಎನ್ನುವುದು ಓದುಗರ ಅಭಿಪ್ರಾಯವಾಗಿದೆ.

ಕೇವಲ ಕಟ್ಟಡವನ್ನು ನವೀಕರಿಸಿ ಆಧುನಿಕ ಪೀಠೋಪಕರಣಗಳನ್ನು ಒದಗಿಸಿದ ಮಾತ್ರಕ್ಕೆ ಗ್ರಂಥಾಲಯಗಳಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎನ್ನುವ ನಿರ್ಧಾರಕ್ಕೆ ಬರುವುದು ಆತುರದ ನಡೆಯಾಗುತ್ತದೆ. ಓದುಗರ ಅಭಿರುಚಿ ಮತ್ತು ಅಗತ್ಯಕ್ಕೆ ಅನುಗುಣವಾದ ಪುಸ್ತಕಗಳು ಗ್ರಂಥಾಲಯಗಳಲ್ಲಿ ದೊರೆಯುವಂತಾಗಬೇಕು. ಕಳೆದ ಮೂರು ವರ್ಷಗಳಿಂದ (2020-2022) ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಪುಸ್ತಕಗಳನ್ನು ಖರೀದಿಸಿಲ್ಲವೆಂದು ಪ್ರಕಾಶಕರು ತಮ್ಮ ಅಳಲು ತೋಡಿಕೊಂಡಿರುವರು. 2020 ನೇ ಸಾಲಿನ ಆಯ್ಕೆಯಾದ ಪುಸ್ತಕಗಳನ್ನು ಖರೀದಿಸಲು ಇದುವರೆಗೂ ಸರ್ಕಾರ ಅನುಮೋದನೆ ನೀಡದಿರುವುದು ಖಂಡನಾರ್ಹ. ಓದಿನ ಸಂಸ್ಕೃತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಪುಸ್ತಕಗಳ ಖರೀದಿಗೆ ನೆರವು ನೀಡುವಲ್ಲಿ ವಿಳಂಬ ಮಾಡುವುದು ಈಗಾಗಲೇ ಸೃಷ್ಟಿಯಾಗಿರುವ ಓದುಗರು ಮತ್ತು ಪುಸ್ತಕಗಳ ನಡುವಣ ಕಂದಕವನ್ನು ಮತ್ತಷ್ಟು ವಿಸ್ತರಿಸಲು ಆಹ್ವಾನ ನೀಡಿದಂತಾಗುತ್ತದೆ.   

ಕಟ್ಟಡ, ಪೀಠೋಪಕರಣಗಳು ಮತ್ತು ಪುಸ್ತಕಗಳಷ್ಟೆ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಪಾತ್ರ ಕೂಡ ಮಹತ್ವದ್ದಾಗಿದೆ. ಓದುಗರ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಪುಸ್ತಕಗಳ ಉಪಯೋಗ ವ್ಯಾಪಕವಾಗಿ ವಿಸ್ತರಿಸುವ ವಾತಾವರಣವನ್ನು ಗ್ರಂಥಾಲಯದಲ್ಲಿ ನಿರ್ಮಾಣಮಾಡಬೇಕು. ಪುಸ್ತಕಗಳು ಕಣ್ಣಿಗೆ ಚೆಂದ ಕಾಣುವಂತೆ ಜೋಡಿಸಿಡುವುದಕ್ಕಿಂತ ಓದಿಸಿಕೊಂಡು ಜೀರ್ಣವಾಗಲು ಅವಕಾಶ ಮಾಡಿಕೊಡಬೇಕು. ಪುಸ್ತಕವೊಂದು ಎಷ್ಟೊಂದು ಪ್ರಮಾಣದಲ್ಲಿ ಓದಿಸಿಕೊಂಡಿದೆ ಎನ್ನುವುದನ್ನು ದಾಖಲೆಗಳ ಮೂಲಕ ಹೇಳಲು ಸಾಧ್ಯವಿಲ್ಲ. ಪುಸ್ತಕದ ಭೌತಿಕ ಸ್ವರೂಪವೇ ಅದನ್ನು ಹೇಳುತ್ತದೆ. ಕಥೆಗಾರ ಎಸ್.ದಿವಾಕರ್ ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ ಎನ್ನುವ ತಮ್ಮ ಪ್ರಬಂಧದಲ್ಲಿ ಹೀಗೆ ಹೇಳಿರುವರು-‘ಪುಸ್ತಕಗಳ ರಟ್ಟು ಕಿತ್ತುಹೋಗಿರಬಹುದು, ಅವುಗಳ ಪುಟಗಳು ನಾಯಿಕಿವಿಗಳಾಗಿರಬಹುದು, ಹೊಲಿಗೆಯೋ ಅಂಟೋ ಬಿಚ್ಚಿಕೊಂಡು ಕೆಲವು ಹಾಳೆಗಳೇ ಸಡಿಲವಾಗಿರಬಹುದು. ಅವು ಮತ್ತೆ ಮತ್ತೆ ಓದಿಸಿಕೊಂಡು ತಮ್ಮ ಸುಸ್ವರೂಪ ಕಳೆದುಕೊಂಡ ಪುಸ್ತಕಗಳು. ಅಂಥ ಪುಸ್ತಕಗಳ ಮಾರ್ಜಿನ್ನಿನ ತುಂಬ ಪೆನ್ಸಿಲಿನಲ್ಲೋ ಪೆನ್ನಲ್ಲೋ ಗೀಚಿರುವ ಬರಹಗಳಿದ್ದರೆ ಆಶ್ಚರ್ಯವಿಲ್ಲ’.

ಹಿಂದೆಲ್ಲ ಮನೆಬಾಗಿಲಿಗೆ ಪುಸ್ತಕಗಳನ್ನು ಕೊಂಡೊಯ್ದು ಓದುಗರಿಗೆ ಒದಗಿಸುವ ‘ಸಂಚಾರಿ ಗ್ರಂಥಾಲಯ’ ಸೇವೆ ಚಾಲ್ತಿಯಲ್ಲಿತ್ತು. ವಿಶೇಷವಾಗಿ ಗೃಹಿಣಿಯರಿಗೆ ತಮ್ಮ ಮನೆಗೆಲಸದ ಬಿಡುವಿನ ವೇಳೆ ಸಂಚಾರಿ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದಲು ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಇಂದು ಸಂಚಾರಿ ಗ್ರಂಥಾಲಯ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಸೇವೆಯನ್ನು ಮತ್ತೆ ಪುನರಾರಂಭಿಸುವುದು ಓದಿನ ಅಭಿರುಚಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಸಾರ್ವಜನಿಕರು ಕೂಡ ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಳ್ಳುವುದು ಮುಖ್ಯವಾಗಿದೆ. ಸಾರ್ವಜನಿಕ ಸಭೆ ಸಮಾರಂಭಗಳು ಮಾತ್ರವಲ್ಲದೆ ಕುಟುಂಬದ ಖಾಸಗಿ ಸಮಾರಂಭಗಳಲ್ಲೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಆಚರಣೆಗೆ ಬರಬೇಕು.

ಮೊಬೈಲ್‍ನ ವ್ಯಾಪಕ ಬಳಕೆ ಓದಿನ ಆಸಕ್ತಿ ಕ್ಷೀಣಿಸುತ್ತಿರುವುದಕ್ಕೆ ಪ್ರಬಲ ಕಾರಣಗಳಲ್ಲೊಂದು. ಎಲ್ಲ ವಯೋಮಾನದವರಲ್ಲಿ ಮೊಬೈಲ್ ಬಳಕೆಯ ವ್ಯಾಮೋಹ ಸೋಂಕಿನಂತೆ ಹರಡುತ್ತಿದೆ. ಪುಸ್ತಕಗಳ ಓದಿನ ಹವ್ಯಾಸವನ್ನು ಹೆಚ್ಚಿಸುವುದೇ ಈ ಸಮಸ್ಯೆಯ ಪರಿಹಾರಕ್ಕಿರುವ ಪರ್ಯಾಯ ಮಾರ್ಗವಾಗಿದೆ. ಈ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸಾರ್ವಜನಿಕರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಲು ಅಗತ್ಯದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಯೋಜನೆಗಳನ್ನು ಅನುಷ್ಠಾನಗೊಳಿಸಲು ಗ್ರಂಥಾಲಯ ಇಲಾಖೆಗೆ ಆರ್ಥಿಕ ನೆರವು ನೀಡುವುದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿಯಾಗಬೇಕು. ಜೊತೆಗೆ ಗ್ರಂಥಾಲಯ ಸಪ್ತಾಹ ಕೇವಲ ಏಳು ದಿನಗಳ ಆಚರಣೆಯಾಗದೆ ಅದು ದಿನನಿತ್ಯದ ಹಬ್ಬವಾಗಬೇಕು.

-ರಾಜಕುಮಾರ ಕುಲಕರ್ಣಿ


Tuesday, December 12, 2023

ಸೇಡು, ದ್ವೇಷದ ಸಂದೇಶ ಬೇಕೆ?

    


(05.10.2023 ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ  ಪ್ರಕಟ)

       ಬೆಳಗ್ಗೆ ವಾಕಿಂಗ್ ವೇಳೆ ಎದುರಾದ ಹಿರಿಯರ ತಂಡ ಗಹನವಾದ ಚರ್ಚೆಯಲ್ಲಿ ತೊಡಗಿತ್ತು. ಸಾಮಾಜಿಕ ಮಾಧ್ಯಮವಾದ ವಾಟ್ಸ್‍ಆ್ಯಪ್ ಬಳಕೆಗೆ ಭವಿಷ್ಯದಲ್ಲಿ ನಿರ್ಧಿಷ್ಟ ಶುಲ್ಕವನ್ನು ಗ್ರಾಹಕರು ಭರಿಸುವಂತಾಗಬೇಕು ಎನ್ನುವ ಆಶಯ ತಂಡದಲ್ಲಿದ್ದ ಹಿರಿಯರದಾಗಿತ್ತು. ಈ ಮೂಲಕವಾದರೂ ವಾಟ್ಸ್‍ಆ್ಯಪ್‍ನ ದುರ್ಬಳಕೆ ಕಡಿಮೆಯಾಗಬಹುದು ಎನ್ನುವುದು ಈ ಆಶಯದ ಹಿಂದಿನ ಸದುದ್ದೇಶವಾಗಿತ್ತು. ಸಧ್ಯದ ಸಂದರ್ಭದಲ್ಲಿ ಕೆಟ್ಟ ಮತ್ತು ದ್ವೇಷಪೂರಿತ ಸಂದೇಶಗಳು ವಾಟ್ಸ್‍ಆ್ಯಪ್‍ನಲ್ಲಿ ಅವ್ಯಾಹತವಾಗಿ ಹರಿದಾಡುತ್ತಿರುವುದೆ ಇಂಥದ್ದೊಂದು ಅಭಿಪ್ರಾಯ ರೂಪುಗೊಳ್ಳಲು ಕಾರಣವಾಗಿದೆ ಎನ್ನಬಹುದು.

‘ನಿನಗೆ ಮೋಸ ಮಾಡಿದ ಜನರು ಸಧ್ಯದ ಪರಿಸ್ಥಿತಿಯಲ್ಲಿ ನಗುನಗುತ್ತಾ ಇರಬಹುದು, ಆದರೆ ಆ ನಗು ಶಾಶ್ವತವಲ್ಲ. ಮಾಡಿದ ಮೋಸಕ್ಕೆ ನರಳಿ ನರಳಿ ಕಣ್ಣೀರಿಡುವ ದಿನ ಬಂದೇ ಬರುತ್ತದೆ, ಕಾದು ನೋಡಿ’ ಇಂಥದ್ದೊಂದು ಸಂದೇಶವನ್ನು ಪರಿಚಿತರೊಬ್ಬರು ತಮ್ಮ ವಾಟ್ಸ್‍ಆ್ಯಪ್ ಸ್ಟೇಟಸ್ ಮೂಲಕ ಹಂಚಿಕೊಂಡಿದ್ದರು. ಓದಿ ಒಂದು ಕ್ಷಣ ಹಂಚಿಕೊಂಡವರ ಮನಸ್ಥಿತಿ ಕುರಿತು ಕಳವಳವಾಯಿತು. ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವ ಈ ಸಂದೇಶ ಮನಸ್ಸಿನ ವಿಕೃತಿಗೆ ಕನ್ನಡಿ ಹಿಡಿದಂತಿದೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಇಂಥ ಸಂದೇಶಗಳು ಬಹಳ ಅಪಾಯಕಾರಿ. ವಿಷ ಉಣಿಸಿದವನಿಗೆ ಹಾಲನೆರೆ, ಕಲ್ಲು ಹೊಡೆದವನ ಮನೆಗೆ ಹೂವನೆಸೆ ಎಂದು ಹಿರಿಯರು ನುಡಿದು, ಅವರು ನುಡಿದಂತೆ ಬದುಕಿ ಬಾಳಿದ ಈ ಸಮಾಜದಲ್ಲಿ ಈಗ ವಿಕೃತ ಸಂದೇಶಗಳು ರವಾನೆಯಾಗುತ್ತಿವೆ. 

ದ್ವೇಷ ಮತ್ತು ಪ್ರತೀಕಾರದಿಂದ ಕೂಡಿದ ಸಂದೇಶಗಳನ್ನು ಹರಡುವುದರ ಮೂಲಕ ನಾವು ನಮ್ಮ ಮಕ್ಕಳಿಗೆ ಏನನ್ನು ಕಲಿಸುತ್ತಿದ್ದೇವೆ ಎಂದು ಪಾಲಕರು ಯೋಚಿಸಬೇಕಿದೆ. ಬುದ್ಧಗುರುವಿನ ಕರುಣೆ, ಬಸವಣ್ಣನವರ ಚಿಂತನೆ, ಗಾಂಧೀಜಿಯ ಸತ್ಯಸಂಧತೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಯಬೇಕಾದ ಪಾಲಕರೆ ಸಾಮಾಜಿಕ ಮಾಧ್ಯಮಗಳಲ್ಲಿ ಅನಾರೋಗ್ಯಕರವಾದ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವರು. ಒಂದರ್ಥದಲ್ಲಿ ಇಂಥ ಸಂದೇಶಗಳ ಮೂಲಕ ಸ್ವತ: ಪಾಲಕರೆ ಮಕ್ಕಳಲ್ಲಿ ದ್ವೇಷದ ಬೀಜವನ್ನು ಬಿತ್ತಿದಂತಾಗುತ್ತದೆ. ಇನ್ನೊಂದು ವಿಧದಲ್ಲಿ ಇಂಥ ಕೆಟ್ಟ ಸಂದೇಶಗಳು ಮಕ್ಕಳ ಓದಿನ ಅಭಿರುಚಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದು ಪುಸ್ತಕಗಳ ಓದಿನ ಅಭಿರುಚಿ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಭಾಷೆಯೊಂದನ್ನು ಕೆಟ್ಟ ಸಂದೇಶಗಳ ಮೂಲಕ ಮಕ್ಕಳಿಗೆ ಪರಿಚಯಿಸುವುದರಿಂದ ಮತ್ತಷ್ಟು ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ.

ಸಾಮಾಜಿಕ ಮಾಧ್ಯಮದ ಮೂಲಕ ದ್ವೇಷ, ಸೇಡು ಮತ್ತು ಪ್ರತೀಕಾರದ ಸಂದೇಶಗಳನ್ನು ಹರಡುವುದು ಅದೊಂದು ರೀತಿಯ ಮಾನಸಿಕ ಕ್ರೌರ್ಯ. ಇಲ್ಲಿ ಕೇವಲ ಶಬ್ದಗಳ ಮೂಲಕ ವ್ಯಕ್ತಿ ಇನ್ನೊಬ್ಬನ ಮೇಲೆ ಹಲ್ಲೆ ಮಾಡುತ್ತಾನೆ. ಪ್ರಖ್ಯಾತ ಮನೋವಿಶ್ಲೇಷಣಾ ತಜ್ಞ ಎರಿಕ್ ಫ್ರಾಮ್ ತನ್ನ ‘ದಿ ಅನಾಟಮಿ ಆಫ್ ಹ್ಯೂಮನ್ ಡಿಸ್ಟ್ರಕ್ಟಿವನೆಸ್’ ಎಂಬ ಗ್ರಂಥದಲ್ಲಿ ವಿಶ್ಲೇಷಿರುವ ಮಾನವ ಸ್ವಭಾವದ ವ್ಯಾಖ್ಯಾನವನ್ನು ಕಥೆಗಾರ ಎಸ್.ದಿವಾಕರ್ ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವರು. ಆ ವ್ಯಾಖ್ಯಾನ ಹೀಗಿದೆ-‘ಇತರರನ್ನು ಹಂಗಿಸುವ, ಅವರ ಭಾವನೆಗಳ ಮೇಲೆ ಹಲ್ಲೆಮಾಡುವ ಮಾನಸಿಕ ಕ್ರೌರ್ಯವಿದೆಯಲ್ಲ, ಅದು ದೈಹಿಕ ಕ್ರೌರ್ಯಕ್ಕಿಂತ ಹೆಚ್ಚು ವ್ಯಾಪಕ. ಇಂಥ ಕ್ರೌರ್ಯ ಎಸಗುವವನು ಸ್ವತ: ಸುರಕ್ಷಿತವಾಗಿರುತ್ತಾನೆ. ಯಾಕೆಂದರೆ ಅವನು ಉಪಯೋಗಿಸುವುದು ದೈಹಿಕ ಶಕ್ತಿಯನ್ನಲ್ಲ ಕೇವಲ ಶಬ್ದಗಳನ್ನು ಮಾತ್ರ’. 

ಓದಿದ ಉತ್ತಮ ಪುಸ್ತಕ, ಕೇಳಿದ ಸನ್ಮಾರ್ಗದ ಮಾತು, ನೋಡಿದ ಒಳ್ಳೆಯ ಸಿನಿಮಾ, ಭೇಟಿನೀಡಿದ ಸುಂದರ ಪ್ರವಾಸಿತಾಣದಂತಹ ಮಹತ್ವದ ಮತ್ತು ಆರೋಗ್ಯಕರವಾದ ಮಾಹಿತಿಯನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಬೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ಅದೊಂದು ಉತ್ತಮವಾದ ನಡೆ. ವಿಷಯಾಧಾರಿತ ಚರ್ಚೆ ಮತ್ತು ಸಂವಾದಗಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಾಗಬೇಕು. ಒಟ್ಟಾರೆ ಹಂಚಿಕೊಂಡ ಸಂದೇಶಗಳು ನಮ್ಮ ಬೌದ್ಧಿಕ ವಿಕಾಸಕ್ಕೆ ನೆರವಾಗಬೇಕು. ವಿಪರ್ಯಾಸವೆಂದರೆ ಸಾಮಾಜಿಕ ಮಾಧ್ಯಮವನ್ನು ದ್ವೇಷ, ಪ್ರತೀಕಾರದ ಸಾಧನೆಗೆ ಗುರಾಣಿಯಾಗಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚು.  ಧರ್ಮ ಮತ್ತು ಸಮುದಾಯಗಳ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಹರಡುವುದರ ಮೂಲಕ ಸಮಾಜದಲ್ಲಿನ ಸೌಹಾರ್ದ ವಾತಾವರಣವನ್ನು ಕದಡಲಾಗುತ್ತಿದೆ. ಚುನಾವಣೆಯ ಸಂದರ್ಭ ಫೇಸ್‍ಬುಕ್ ಮತ್ತು ವಾಟ್ಸ್‍ಆ್ಯಪ್‍ಗಳನ್ನು ಎದುರಾಳಿಗಳ ತೇಜೊವಧೆಗಾಗಿ ರಾಜಕಾರಣಿಗಳು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವರು. ಸೃಜನಶೀಲ ಕ್ಷೇತ್ರವೆಂದೆ ಪರಿಗಣಿತವಾದ ಸಾಹಿತ್ಯದಲ್ಲೂ ಬರಹಗಾರರು ಪರಸ್ಪರ ನಿಂದನೆಗೆ ಪ್ರಬಲ ಅಸ್ತ್ರವಾಗಿ ಈ ಮಾಧ್ಯಮವನ್ನು ಉಪಯೋಗಿಸುತ್ತಿರುವುದು ಆತಂಕದ ಸಂಗತಿ.

ಸಾಮಾಜಿಕ ಮಾಧ್ಯಮದ ಮೂಲಕ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿರುವ ರೋಗಗ್ರಸ್ಥ ಮನಸ್ಥಿತಿಯನ್ನು ನಿಯಂತ್ರಿಸಲು ಮನಶಾಸ್ತ್ರಜ್ಞ ಎರಿಕ್ ಬರ್ನ್‍ಸ್ಟೀನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಅನ್ಯಾಲಿಸಿಸ್’  ಎನ್ನುವ ಪರಿಕಲ್ಪನೆಯನ್ನು ಶಿಕ್ಷಣ ಮತ್ತು ಬೋಧನೆಯ ಮೂಲಕ ಕಾರ್ಯಗತಗೊಳಿಸಬೇಕಾದ ಅಗತ್ಯವಿದೆ. ಈ ಪರಿಕಲ್ಪನೆಯು ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ವಿಧಾನದಲ್ಲಿ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ತನ್ನ ವರ್ತನೆ, ಆಲೋಚನೆ ಮತ್ತು ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿಗಳು. ಸಂಭಾಷಣೆ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನು ಉಂಟುಮಾಡದಂತೆ ಪೂರ್ವ ಸಿದ್ಧತೆಯೊಂದಿಗೆ ಮಾತಿಗಿಳಿಯುವುದೇ ಟ್ರಾನ್ಸಾಕ್ಷನಲ್ ಅನ್ಯಾಲಿಸಿಸ್ ಸಿದ್ಧಾಂತದ ಪ್ರಮುಖ ಲಕ್ಷಣವಾಗಿದೆ.

ನಿನ್ನನ್ನು ಎಷ್ಟು ನಿಂದಿಸಿದರೂ ನಿನಗೆ ನೋವಾಗುವುದಿಲ್ಲವೆ ಎಂದ ದೇವದತ್ತನ ಮಾತಿಗೆ ಭಗವಾನ್ ಬುದ್ಧ ಪ್ರತಿಕ್ರಿಯಿಸಿದ್ದು ಹೀಗೆ-‘ಒಬ್ಬ ಇನ್ನೊಬ್ಬನಿಗೆ ಏನಾದರೂ ಕೊಡುತ್ತಾನೆ. ಆ ಇನ್ನೊಬ್ಬನು ಅದನ್ನು ತೆಗೆದುಕೊಳ್ಳದೆ ಹೋದರೆ, ಅದು ಕೊಡುವವನಿಗೇ ಸೇರುತ್ತದೆ. ನೀನು ನನಗೆ ರಾಶಿರಾಶಿ ಬೈಗುಳಗಳನ್ನು ಕೊಟ್ಟೆ, ಅದನ್ನು ನಾನು ತೆಗೆದುಕೊಳ್ಳಲಿಲ್ಲ. ಆಗ ಬೈಗುಳಗಳ ರಾಶಿ ಯಾರಿಗೆ ಸೇರಬೇಕು? ನಿನಗೇ ತಾನೆ’. ಸಾಮಾಜಿಕ ಜಾಲತಾಣಗಳಲ್ಲಿ ಅನಾರೋಗ್ಯಕರವಾದ ಸಂದೇಶಗಳು ಪುಂಖಾನುಪುಂಖವಾಗಿ ಹರಿದಾಡುತ್ತಿರುವ ಈ ಸಂದರ್ಭ ಬುದ್ಧ ಗುರುವಿನ ನಿರ್ಲಿಪ್ತ ಗುಣವನ್ನು ಮೈಗೂಡಿಸಿಕೊಳ್ಳಬೇಕಾದದ್ದು ತುರ್ತು ಅಗತ್ಯವಾಗಿದೆ.

-ರಾಜಕುಮಾರ ಕುಲಕರ್ಣಿ

Friday, November 3, 2023

ಗ್ರಾಮೀಣ ಗ್ರಂಥಾಲಯ ಜನಸ್ನೇಹಿ ಆಗಲಿ

 


(೨೨.೦೯.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

      ಇತ್ತೀಚೆಗೆ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ತರಬೇತಿ ಶಿಬಿರದಲ್ಲಿ ನಾನು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದೆ. ಶಿಬಿರಾರ್ಥಿಗಳಲ್ಲಿ ಗ್ರಂಥಾಲಯ ಸಂಬಂಧಿತ ಹೊಸ ಸಂಗತಿಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿ ಮತ್ತು ಕುತೂಹಲಗಳಿದ್ದದ್ದು ಕಂಡುಬಂತು. ಉಪನ್ಯಾಸದ ಕೊನೆಗೆ ಇಪ್ಪತ್ತು ಪ್ರಶ್ನೆಗಳ ಕಿರುಪರೀಕ್ಷೆಯನ್ನು ತೆಗೆದುಕೊಳ್ಳಲಾಯಿತು. ಪಡೆದ ಅಂಕಗಳನ್ನಾಧರಿಸಿ ಅವರಿಗೆ ವೃತ್ತಿಯಲ್ಲಿ ಆಸಕ್ತಿ ಇದೆ ಅಥವಾ ಇಲ್ಲ ಎಂದು ಮೌಲ್ಯಮಾಪನದ ಮೂಲಕ  ಗುರುತಿಸಲಾಯಿತು. ಪ್ರತಿಶತ 90 ರಷ್ಟು ಶಿಬಿರಾರ್ಥಿಗಳು ವೃತ್ತಿಯಲ್ಲಿ ಆಸಕ್ತಿ ಇದೆ ಎನ್ನುವ ಗುಂಪಿಗೆ ಸೇರ್ಪಡೆಯಾದರು. 

ಉಪನ್ಯಾಸದ ಸಂದರ್ಭ ಶಿಬಿರಾರ್ಥಿಗಳನ್ನು ನಿಮ್ಮ ಗ್ರಂಥಾಲಯ ವ್ಯಾಪ್ತಿಯಲ್ಲಿನ ಓದುಗರಿಗೆ ಅಗತ್ಯವಾದ ಪುಸ್ತಕಗಳು ನಿಮ್ಮಲ್ಲಿವೆಯೇ ಎಂದು ಕೇಳಿದೆ. ಆಗ ಹೆಚ್ಚಿನ ಸಂಖ್ಯೆಯ ಶಿಬಿರಾರ್ಥಿಗಳ ಉತ್ತರ ನಕರಾತ್ಮಕವಾಗಿತ್ತು. ಪುಸ್ತಕ ಆಯ್ಕೆ ಸಮಿತಿಯಾಗಲಿ ಮತ್ತು ಕೇಂದ್ರ ಗ್ರಂಥಾಲಯವಾಗಲಿ ಗ್ರಾಮೀಣ ಗ್ರಂಥಾಲಯಗಳಿಂದ ಬೇಡಿಕೆಯ ಪುಸ್ತಕಗಳ ಪಟ್ಟಿಯನ್ನು ಪಡೆಯುವುದಿಲ್ಲವೆಂಬ ಸಂಗತಿ ತಿಳಿದುಬಂತು. ಕೇಂದ್ರ ಗ್ರಂಥಾಲಯವು ಪೂರೈಸುವ ಪುಸ್ತಕಗಳನ್ನಷ್ಟೆ ಸಂಗ್ರಹಿಸಿಡುವ ಕೆಲಸ ತಮ್ಮದೆಂದು ಕೆಲವರು ಬೇಸರ ವ್ಯಕ್ತಪಡಿಸಿದರು. ಪರಿಣಾಮವಾಗಿ ಗ್ರಾಮೀಣ ಭಾಗದ ಓದುಗರಿಗೆ ಅಗತ್ಯವಾದ ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲವೆಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಕರ್ನಾಟಕದ ಗ್ರಾಮೀಣ ಭಾಗದ ಜನಜೀವನ, ಉದ್ಯೋಗ, ಕೃಷಿ ಇವುಗಳಲ್ಲಿ ವಿಭಿನ್ನತೆ ಇದೆ. ಹೀಗಾಗಿ ಒಂದೇ ಪ್ರಕಾರದ ಪುಸ್ತಕಗಳನ್ನು ಎಲ್ಲ ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ಒದಗಿಸುವುದು ವೈಜ್ಞಾನಿಕವಾಗಿ ಸರಿಯಾದ ಕ್ರಮವಲ್ಲ. ಐದು ಸಾವಿರಕ್ಕೂ ಹೆಚ್ಚು ಗ್ರಾಮಪಂಚಾಯಿತಿ ಗ್ರಂಥಾಲಯಗಳು ಕರ್ನಾಟಕದಲ್ಲಿವೆ. ಈ ಎಲ್ಲ ಗ್ರಂಥಾಲಯಗಳನ್ನು ವಿಭಾಗವಾರು ವಿಂಗಡಿಸಿ ಆಯಾ ಭಾಗದ ಗ್ರಾಮೀಣ ಜನತೆಯ ಅಗತ್ಯಗಳಿಗನುಸಾರವಾಗಿ ಪುಸ್ತಕಗಳು ಪೂರೈಕೆಯಾಗಬೇಕು. ಕೇವಲ ಕಥೆ, ಕಾದಂಬರಿಗಳಂತಹ ಸಾಹಿತ್ಯ ಕೃತಿಗಳನ್ನು ಮಾತ್ರ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡುತ್ತೇವೆ ಎನ್ನುವುದು ವಿತಂಡವಾದವಾಗುತ್ತದೆ. ಗ್ರಂಥಾಲಯಗಳು ಮಾಹಿತಿ ಕೇಂದ್ರಗಳೂ ಆಗಬೇಕಾಗಿರುವುದರಿಂದ ಆಯಾ ಗ್ರಾಮೀಣ ಪ್ರದೇಶಗಳ ಕೃಷಿ, ಪರಿಸರ, ಸರ್ಕಾರದ ಸವಲತ್ತುಗಳು ಮತ್ತು ಜನಜೀವನವನ್ನಾಧರಿಸಿದ ಪುಸ್ತಕಗಳು ಗ್ರಾಮೀಣ ಗ್ರಂಥಾಲಯಗಳಲ್ಲಿ ಸಿಗುವಂತಾಗಬೇಕು. ಗ್ರಾಮೀಣ ಭಾಗದ ಮಕ್ಕಳ ಓದಿನ ಅಭಿರುಚಿಯ ವಿಕಸನಕ್ಕೆ ಅಗತ್ಯವಾದ ಪುಸ್ತಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೆರವಾಗುವ ಮಾಹಿತಿ ಕೂಡ ಗ್ರಾಮೀಣ ಗ್ರಂಥಾಲಯಗಳಲ್ಲಿ ಲಭ್ಯವಾಗಬೇಕು.  

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಗ್ರಂಥಾಲಯಗಳ ದುಸ್ಥಿತಿ ಕುರಿತು ಬರೆಯುತ್ತ ಹೀಗೆ ಹೇಳುತ್ತಾರೆ ‘ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೆ ಬೇಕಾದ ಮೂಲಭೂತ ಅಗತ್ಯಗಳಾದ ಸುಸಜ್ಜಿತ ಕಟ್ಟಡ, ಕಪಾಟುಗಳು, ಅಗತ್ಯದ ಗ್ರಂಥಗಳು, ಎಲ್ಲ ಪತ್ರಿಕೆಗಳು ಇವುಗಳನ್ನು ಕಲ್ಪಿಸಿಕೊಟ್ಟರೆ ನಮ್ಮ ಸಾಮಾಜಿಕ ರಚನೆಯ ಸ್ವರೂಪವೇ ಬದಲಾಗಬಹುದು. ಹಳ್ಳಿಯ ರೈತನೊಬ್ಬನಿಗೆ ಅಗತ್ಯದ ಮಾಹಿತಿ ಇಂತಹ ಗ್ರಂಥಾಲಯಗಳಲ್ಲಿ ಸಿಗುವಂತೆ ಅದರ ಸ್ವರೂಪವನ್ನು ರೂಪಿಸಿದರೆ ನಮ್ಮ ಗ್ರಂಥಾಲಯಗಳು ಜನಸ್ನೇಹಿಯಾಗಬಹುದು’.

ರಾಜ್ಯದ ಗ್ರಂಥಾಲಯ ಇಲಾಖೆಯು ಪುಸ್ತಕ ಆಯ್ಕೆ ಮತ್ತು ಖರೀದಿಯ ಪ್ರಕ್ರಿಯೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಪುಸ್ತಕಗಳ ಆಯ್ಕೆ ಸಂದರ್ಭ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಸಲಹೆ ಸೂಚನೆಗಳನ್ನು ಪಡೆಯುತ್ತಿಲ್ಲ. ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೂ ಸಹ ಜಿಲ್ಲೆಯ ಲೇಖಕರ/ಪ್ರಕಾಶಕರ ಇಂತಿಷ್ಟು ಪ್ರಮಾಣದ ಪುಸ್ತಕಗಳ ಖರೀದಿಯನ್ನು ಹೊರತುಪಡಿಸಿದರೆ ಹೆಚ್ಚಿನ ಅಧಿಕಾರವಿಲ್ಲ. ಅನೇಕ ಪ್ರಕಾಶಕರು ಆರೋಪಿಸುವಂತೆ ಕೆಲವು ಪುಸ್ತಕ ಪ್ರಕಾಶಕರು ಆಯ್ಕೆ ಸಮಿತಿ ಮತ್ತು ಗ್ರಂಥಾಲಯ ಇಲಾಖೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿರುವರು.  ಸಾರ್ವಜನಿಕ ಗ್ರಂಥಾಲಯಗಳಿಗೆಂದೆ ಪುಸ್ತಕಗಳನ್ನು ಪ್ರಕಟಿಸುವ ಇಂಥ ಪ್ರಕಾಶಕರು ಒಬ್ಬರೆ ಹಲವು ಹೆಸರಿನ ಪ್ರಕಾಶನ ಸಂಸ್ಥೆಗಳ ಮೂಲಕ ಪುಸ್ತಕಗಳನ್ನು ಪೂರೈಸುವರು. ಇಲ್ಲಿ ಅಧಿಕಾರಿಗಳ ಮತ್ತು ಪ್ರಕಾಶಕರ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ಓದುಗರ ಬೇಡಿಕೆ ಮತ್ತು ಅಗತ್ಯ ಹಿನ್ನೆಲೆಗೆ ಸರಿಯುತ್ತವೆ. ಇಂಥ ವಾತಾವರಣದಲ್ಲಿ ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಓದುಗರ ಬೇಡಿಕೆಗೆ ಸ್ಪಂದಿಸುವುದು ದೂರದ ಮಾತು. 

ಇತ್ತೀಚೆಗೆ ನಿಧನರಾದ ವಿಮರ್ಶಕ ಜಿ.ಎಚ್.ನಾಯಕ್ ಅವರ ಕುರಿತು ಬರೆದ ಲೇಖನದಲ್ಲಿ ಎಚ್.ಎಸ್.ರಾಘವೇಂದ್ರರಾವ್ ಉಲ್ಲೇಖಿಸಿರುವ ಒಂದು ಘಟನೆ ಹೀಗಿದೆ-‘ನಾಯಕ್ ಅವರು ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕವಾದಾಗ ಎರಡೋ ಮೂರೋ ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಆಯ್ಕೆ ಮಾಡಬೇಕಾಗಿ ಬಂತು. ಸರಿಯಾಗಿ ಓದಿ ಮೌಲ್ಯಮಾಪನ ಮಾಡಲು ಅವಕಾಶ ಕೊಡದಿದ್ದರೆ ಈ ಕೆಲಸವೇ ಬೇಡವೆಂದು ಆ ಕ್ಷಣವೇ ರಾಜಿನಾಮೆ ಕೊಟ್ಟವರು ನಮ್ಮ ನಾಯಕರು. ಅವರ ಅಧ್ಯಕ್ಷ ಪದವಿ ಆ ಸಭೆಗೇ ಮುಗಿದು ಹೋಯಿತು’. ಆದರೆ ಜಿ.ಎಚ್.ನಾಯಕ್ ಅವರಂತೆ ಮನಸಾಕ್ಷಿಗನುಗುಣವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಈಗ ಸಿಗುವುದು ವಿರಳ. 

ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ಅವರು ಎರಡು ಪ್ರತ್ಯೇಕ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿದೆ. ಸಂಬಳ ಜಿಲ್ಲಾಪಂಚಾಯಿತಿ ಇಲಾಖೆ ಪಾವತಿಸಿದರೆ, ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಪೂರೈಸುತ್ತದೆ. ಈ ಎರಡು ಇಲಾಖೆಗಳ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ಗ್ರಾಮಪಂಚಾಯಿತಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿ.ಡಿ.ಒ) ಮತ್ತು ಮೇಲ್ವಿಚಾರಕರ ಮಧ್ಯೆ ಸಮನ್ವಯತೆಯ ಕೊರತೆ ಕೂಡ ಪ್ರಮುಖ ಸಮಸ್ಯೆಯಾಗಿದೆ. ಸಂಬಳವನ್ನು ಪ್ರತಿತಿಂಗಳು ನಿಯಮಿತವಾಗಿ ಪಾವತಿಸದೆ ವಿಳಂಬ ಮಾಡುತ್ತಿರುವುದು ಮೇಲ್ವಿಚಾರಕರಲ್ಲಿ ಕೆಲಸದ ನಿರಾಸಕ್ತಿಗೆ ಕಾರಣವಾಗಿದೆ. ಇಲಾಖೆಗಳ ನಡುವಣ ಸಂಘರ್ಷ ಮತ್ತು ಪುಸ್ತಕ ಖರೀದಿ ಪ್ರಕ್ರಿಯೆಯ ಕೇಂದ್ರಿಕೃತ ವ್ಯವಸ್ಥೆಯಿಂದಾಗಿ ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಸುಧಾರಣೆ ಆಗಬೇಕಾಗಿರುವುದು ತಳಮಟ್ಟದಲ್ಲಲ್ಲ, ನೀತಿ ನಿಯಮಗಳನ್ನು ರೂಪಿಸುವ ಮತ್ತು ದೂರದಲ್ಲಿ ಕುಳಿತು ಏಕಪಕ್ಷಿಯ ನಿರ್ಧಾರ ತೆಗೆದುಕೊಳ್ಳುವ ಮೇಲ್ಮಟ್ಟದಲ್ಲಾಗಬೇಕು. ದುರಂತವೆಂದರೆ ನಾವು ಸದಾಕಾಲ ತಳಮಟ್ಟದ ಸುಧಾರಣೆಗಳತ್ತ ಗಮನಹರಿಸುತ್ತ ಮೇಲ್ಮಟ್ಟದ ಆಡಳಿತಶಾಹಿಯನ್ನು ಮರೆತು ಬಿಡುತ್ತೇವೆ. 

-ರಾಜಕುಮಾರ ಕುಲಕರ್ಣಿ


Tuesday, October 3, 2023

ಭೌತಿಕ ಶುಚಿತ್ವ ಮತ್ತು ಬೌದ್ಧಿಕ ವಿಕಸನ

     



( ೧೦.೦೭.೨೦೨೩ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

         ಇತ್ತೀಚೆಗೆ ಮಿತ್ರರೊಬ್ಬರ ಊರಿನಲ್ಲಿ ಮುಖ್ಯ ಬಸ್ ನಿಲ್ದಾಣಕ್ಕಿಂತ ಪೂರ್ವದ ನಿಲ್ದಾಣದಲ್ಲಿ ಇಳಿದು ಮೂತ್ರವಿಸರ್ಜನೆಗಾಗಿ ಸುತ್ತಲು ದೃಷ್ಟಿ ಬೀರಿದವನಿಗೆ ಅಲ್ಲೆಲ್ಲೂ ಸಾರ್ವಜನಿಕ ಶೌಚಾಲಯ ಗೋಚರಿಸಲಿಲ್ಲ. ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ದಟ್ಟವಾದ ಆ ಪ್ರದೇಶದಲ್ಲಿ ಬಯಲುಭೂಮಿಯನ್ನು ಹುಡುಕಿಕೊಂಡು ಹೋಗುವುದು ಅಸಾಧ್ಯವಾದ ಕೆಲಸವಾಗಿತ್ತು. ಕೊನೆಗೆ ಈ ಸಮಸ್ಯೆಗೆ ಪರಿಹಾರ ಸ್ನೇಹಿತರ ಮನೆ ತಲುಪಿದ ನಂತರವೇ ಪ್ರಾಪ್ತವಾಯಿತು. ಮನೆ ತಲುಪವರೆಗೂ ನನಗಾದ ಸಂಕಟ ವರ್ಣಿಸಲಸಾಧ್ಯವಾಗಿತ್ತು. ‘ಹೆಜ್ಜೆ ಹೆಜ್ಜೆಗೂ ದೇವಾಲಯಗಳಿರುವ ಈ ಊರಿನಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ರಸ್ತೆಬದಿ ಶೌಚಾಲಯಗಳಿಲ್ಲ ನೋಡಿ’ ಎಂದ ಸ್ನೇಹಿತರ ಮಾತಿನಲ್ಲಿ ಸ್ಥಳೀಯ ಆಡಳಿತದ ವೈಫಲ್ಯ ಢಾಳಾಗಿ ಎದ್ದು ಕಾಣುತ್ತಿತ್ತು 

ಇದೇ ಸಮಯದಲ್ಲಿ ನನ್ನ ಸ್ನೇಹಿತರ ಮನೆಗೆ ಅತಿಥಿಯಾಗಿ ಬಂದ ಹಿರಿಯರೊಬ್ಬರು ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು. ಮನೆಯಿಂದ ಸಾರ್ವಜನಿಕ ಗ್ರಂಥಾಲಯ ಬಹಳ ದೂರದಲ್ಲಿರುವುದರಿಂದ ಸ್ನೇಹಿತರು ತಮ್ಮ ಅಸಹಾಯಕತೆ ತೋಡಿಕೊಂಡರು. ಹಿರಿಯರು ಸಮೀಪದಲ್ಲಿ ಶಾಖಾ ಗ್ರಂಥಾಲಯ ಇದೆಯೇ ಎಂದು ಕೇಳಿದರು. ಆಗ ಸ್ನೇಹಿತರ ಉತ್ತರ ನಕಾರಾತ್ಮಕವಾಗಿತ್ತು. ಕೊನೆಗೆ ಖಾಸಗಿ ಗ್ರಂಥಾಲಯದ ಬಗ್ಗೆ ಪ್ರಶ್ನಿಸಿದರು. ಈ ಖಾಸಗಿ ಗ್ರಂಥಾಲಯ ಎನ್ನುವ ವ್ಯವಸ್ಥೆ ಮರೆಯಾಗಿ ಹಲವು ದಶಕಗಳೇ ಸಂದಿರುವಾಗ ಆ ಹಿರಿಯರಿಗೆ ಉತ್ತರಿಸಲು ತುಂಬ ಇರಿಸುಮುರಿಸಾಯಿತು. ಪುಸ್ತಕಗಳ ಓದಿನ ಸಂಸ್ಕೃತಿಯೇ ನಾಶವಾಗುತ್ತಿದೆಯಲ್ಲ ಎಂದು ಅವರು ಬಹಳ ವೇದನೆಪಟ್ಟುಕೊಂಡರು. 

ಶೌಚಾಲಯ ಮತ್ತು ಗ್ರಂಥಾಲಯ ನಾಗರಿಕ ಸಮಾಜದ ಎರಡು ಬಹುಮುಖ್ಯ ಅಗತ್ಯಗಳಾಗಿವೆ. ಒಂದು ಭೌತಿಕÀ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಇನ್ನೊಂದು ಬೌದ್ಧಿಕ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಮನುಷ್ಯ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಎರಡೂ ಸ್ತರಗಳಲ್ಲಿ ಪ್ರಗತಿ ಸಾಧಿಸಬೇಕಿರುವುದರಿಂದ ಶೌಚಾಲಯ ಮತ್ತು ಗ್ರಂಥಾಲಯಗಳು ಅತಿ ಅಗತ್ಯದ ಬೇಡಿಕೆಗಳಾಗಿವೆ. ಈ ದಿಸೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರ ಸಾರ್ವಜನಿಕ ಶೌಚಾಲಯಗಳನ್ನು ಮತ್ತು ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಆದರೆ ಸ್ಥಾಪನೆಯಲ್ಲಿರುವ ಆಸಕ್ತಿ ನಂತರದ ದಿನಗಳಲ್ಲಿ ಅವುಗಳ ನಿರ್ವಹಣೆಯಲ್ಲಿ ಕಾಣಿಸುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಗ್ರಂಥಾಲಯಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳು ಮತ್ತು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿನ ಶೌಚಾಲಯಗಳು ಅವ್ಯವಸ್ಥೆಯ ಆಗರಗಳಾಗಿವೆ. ಶೌಚಾಲಯಗಳನ್ನು ಪ್ರವೇಶಿಸಿ ಅಲ್ಲಿನ ದುರ್ಗಂಧವನ್ನು ಸಹಿಸಿಕೊಳ್ಳುವುದಕ್ಕಿಂತ ದೈಹಿಕ ಒತ್ತಡವನ್ನು ಸಹಿಸಿಕೊಳ್ಳುವುದು ಎಷ್ಟೋ ಪಾಲು ಉತ್ತಮ ಎನಿಸುತ್ತದೆ. ‘ಶುಚಿತ್ವವಿದ್ದಲ್ಲಿ ದೈವತ್ವವಿದೆ’ ಎಂದ ಮಹಾತ್ಮ ಗಾಂಧೀಜಿ ಅವರ ಮಾತನ್ನು ಸರ್ಕಾರ ಮತ್ತು ಸಾರ್ವಜನಿಕರು ಅರ್ಥಮಾಡಿಕೊಂಡಿಲ್ಲ. ಇನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿಯೂ ಅನೇಕ ಸಮಸ್ಯೆಗಳಿವೆ. ಪುಸ್ತಕ, ಪಿಠೋಪಕರಣಗಳು ಮತ್ತು ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ. ಅಗತ್ಯದ ಪುಸ್ತಕಗಳಿಗಿಂತ ಅನಗತ್ಯದ ಪುಸ್ತಕಗಳ ಸಂಖ್ಯೆಯೇ ಅಲ್ಲಿ ಹೆಚ್ಚು. ಗುಣಾತ್ಮಕ ಪುಸ್ತಕಗಳ ಕೊರತೆಯಿಂದಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.  

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯದ ಪರಿಕಲ್ಪನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಅದೆಷ್ಟೋ ಹಳ್ಳಿಗಳಲ್ಲಿ ಸರ್ಕಾರದ ಅನುದಾನದಲ್ಲಿ ಕಟ್ಟಿದ ಶೌಚಾಲಯಗಳನ್ನು ಮನೆಯ ಅನುಪಯುಕ್ತ ವಸ್ತುಗಳನ್ನು ಶೇಖರಿಸಿಡಲು ಜನರು ಉಪಯೋಗಿಸುತ್ತಿರುವರು. ಅನೇಕ ಸಂದರ್ಭಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವರು. ಪರಿಣಾಮವಾಗಿ ‘ಬಯಲುಶೌಚ ಮುಕ್ತ’ ಎನ್ನುವುದು ಸರ್ಕಾರದ ದಸ್ತಾವೇಜುಗಳಲ್ಲಿ ಮಾತ್ರ ದಾಖಲಾಗುತ್ತಿದೆ ವಿನಾ ಪ್ರಾಯೋಗಿಕವಾಗಿ ಸಾಕಾರಗೊಂಡಿಲ್ಲ. ಇದೇ ಮಾತು ಗ್ರಾಮೀಣ ಗ್ರಂಥಾಲಯಗಳಿಗೂ ಅನ್ವಯಿಸುತ್ತದೆ. ಕಾಟಾಚಾರಕ್ಕೆನ್ನುವಂತೆ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ವಿನಾ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಸ್ಥಳೀಯರನ್ನೇ ಗ್ರಂಥಾಲಯಗಳ ಮೇಲ್ವಿಚಾರಕರನ್ನಾಗಿ ನೇಮಿಸುತ್ತಿರುವುದರಿಂದ ಅವರ ಕಾರ್ಯನಿರ್ವಹಣೆ ಕುರಿತು ಪ್ರಶ್ನಿಸುವಂತಿಲ್ಲ. ಬಹಳಷ್ಟು ಗ್ರಾಮಗಳಲ್ಲಿ ಗ್ರಂಥಾಲಯಗಳು ಜೂಜು ಮತ್ತು ಇಸ್ಪಿಟ್ ಆಟದ ಅಡ್ಡಾಗಳಾಗಿ ಪರಿವರ್ತನೆಗೊಂಡಿವೆ.

ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಮತ್ತು ಶೌಚಾಲಯದ ಕೊರತೆ ಬಹುಮುಖ್ಯ ಸಮಸ್ಯೆಯಾಗಿದೆ. ಗ್ರಾಮೀಣ ಭಾಗ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿಯೂ ಗ್ರಂಥಾಲಯ ಮತ್ತು ಶೌಚಾಲಯಗಳಿಲ್ಲ. ಶೌಚಾಲಯಗಳ ಕೊರತೆಯಿಂದಾಗಿ ಮಕ್ಕಳು ದೈಹಿಕ ಒತ್ತಡವನ್ನು ಸಹಿಸಿಕೊಂಡು ಪಾಠದತ್ತ ಗಮನವನ್ನು ಕೇಂದ್ರೀಕರಿಸುವುದು ಕಷ್ಟಸಾಧ್ಯ. ವಿಶೇಷವಾಗಿ ವಿದ್ಯಾರ್ಥಿನಿಯರು ಶೌಚಾಲಯ ಸಂಬಂಧಿತ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿರುವರು. ಈ ಸಮಸ್ಯೆಯಿಂದಾಗಿ ಪ್ರತಿತಿಂಗಳ ಮುಟ್ಟಿನ ಸಂದರ್ಭ ವಿದ್ಯಾರ್ಥಿನಿಯರು ಶಾಲೆಗೆ ಗೈರುಹಾಜರಾಗುವುದು ಕಡ್ಡಾಯ ಎನ್ನುವಂತಾಗಿದೆ. 

ಜ್ಞಾನ ಕಲಿಕೆಯ ಕೇಂದ್ರವಾದ ಶಾಲೆಗಳಲ್ಲಿ ಅತ್ಯುತ್ತಮ ಗ್ರಂಥಾಲಯಗಳನ್ನು ಸ್ಥಾಪಿಸಲು ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ. ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಕಾಟಾಚಾರಕ್ಕೆನ್ನುವಂತೆ ಕೆಲವು ಪುಸ್ತಕಗಳನ್ನು ಅಲ್ಮೆರಾದಲ್ಲಿ ಜೋಡಿಸಿಟ್ಟು ಗ್ರಂಥಾಲಯವೆಂದು ಮಕ್ಕಳಿಗೆ ತೋರಿಸಲಾಗುತ್ತಿದೆ. ಪಠ್ಯಪುಸ್ತಕಗಳ ಪೂರೈಕೆಯಲ್ಲೆ ಅನೇಕ ಸಮಸ್ಯೆಗಳಿರುವಾಗ ಇನ್ನು ಶಾಲಾಗ್ರಂಥಾಲಯಗಳಿಗೆ ಸಾಹಿತ್ಯ ಮತ್ತಿತರ ಪಠ್ಯೇತರ ಪುಸ್ತಕಗಳನ್ನು ಪೂರೈಸುವುದು ದೂರದ ಮಾತು. ಶಿಕ್ಷಕರಲ್ಲಿನ ಓದಿನ ಅಭಿರುಚಿಯ ಕೊರತೆ ಕೂಡ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪನೆಯ ಹಿನ್ನೆಡೆಗೆ ಕಾರಣವಾಗುತ್ತಿದೆ. ಶಾಲಾಹಂತದಲ್ಲೆ ಮಕ್ಕಳಲ್ಲಿ ಓದಿನ ಹವ್ಯಾಸವನ್ನು ಬೆಳೆಸುವಲ್ಲಿ ವಿಫಲವಾಗುತ್ತಿರುವುದರಿಂದ ಸಹಜವಾಗಿಯೇ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ.

ಸರ್ಕಾರ ದೇವಾಲಯಗಳ ನಿರ್ಮಾಣದಲ್ಲಿ ತೋರುವ ಆಸಕ್ತಿ ಶೌಚಾಲಯ ಮತ್ತು ಗ್ರಂಥಾಲಯಗಳ ಸ್ಥಾಪನೆಯಲ್ಲಿ ತೋರಿಸುತ್ತಿಲ್ಲದಿರುವುದು ವಿಪರ್ಯಾಸದ ಸಂಗತಿ. ನಾಗರಿಕ ಸಮಾಜದ ಈ ಎರಡು ಅಗತ್ಯದ ಬೇಡಿಕೆಗಳನ್ನು ಅನುಷ್ಠಾನಕ್ಕೆ ತಂದು ಅವುಗಳನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಸರ್ಕಾರದ್ದಾಗಿದೆ. ಜೊತೆಗೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎನ್ನುವುದನ್ನು ಮರೆಯಬಾರದು.

-ರಾಜಕುಮಾರ ಕುಲಕರ್ಣಿ