Wednesday, July 5, 2017

ಶಿಕಾರಿ: ಮನುಷ್ಯ ಸಂಬಂಧಗಳ ವಿಶ್ಲೇಷಣೆ

           


          ಯಶವಂತ ಚಿತ್ತಾಲರು ‘ನಾನೇಕೆ ಬರೆಯುತ್ತೇನೆ’ ಎನ್ನುವ ಲೇಖನದಲ್ಲಿ ಹೀಗೆ ಹೇಳುತ್ತಾರೆ ‘ಮಾನವೀಯ ಗ್ರಹಿಕೆಯ ಜಗತ್ತು ನಮ್ಮ ವೈಯಕ್ತಿಕ ಪ್ರಜ್ಞೆಯೊಳಗೆ ಒಡಮೂಡುವ ಬಗೆ ಎರಡು ರೀತಿಯಲ್ಲಿ. ಒಂದು ಜ್ಞಾನವಾಗಿ ಇನ್ನೊಂದು ಅನುಭವವಾಗಿ. ಉದಾಹರಣೆಗೆ ರಕ್ತದ ಬಗೆಗಿನ ಜ್ಞಾನವನ್ನು ಶರೀರಶಾಸ್ತ್ರದ ಒಂದು ಪುಸ್ತಕದಿಂದ ಪಡೆಯಬಹುದು. ರಕ್ತದ ಘಟಕಗಳೇನು, ಅದು ದೇಹದಲ್ಲಿ ಹುಟ್ಟುವ ಬಗೆಯೇನು , ಅದರ ಉಪಯೋಗ ಇತ್ಯಾದಿ ಸಂಗತಿಗಳನ್ನು ಓದಿ ತಿಳಿದುಕೊಳ್ಳಬಲ್ಲೆವು. ಆದರೆ ಇದೇ ರಕ್ತ ನನಗೆ ಮರೆಯಲಾಗದ ಅನುಭವವಾದದ್ದು 13 ವರ್ಷದ ನನ್ನ ಮಗಳು ಜಾನಕಿಗೆ ರಕ್ತದ ಕ್ಯಾನ್ಸರ್ ಎಂದು ತಿಳಿದ ಮಧ್ಯಾಹ್ನದ ದುರ್ಧರ ಘಳಿಗೆಯಲ್ಲಿ. ರಕ್ತವೆನ್ನುವುದು ಸುದ್ದಿ ಒಡೆಯುವಾಗ ಸಣ್ಣಗೆ ಕಂಪಿಸಿದ ವೈದ್ಯರ ಧ್ವನಿಯಾಗಿ, ಆಗಿನ ಅವರ ಕಣ್ಣ ನೋಟವಾಗಿ, ಹೆಂಡತಿಯ ಕೈಯನ್ನು ಒತ್ತಿ ಹಿಡಿದಾಗ ಸ್ಪರ್ಷಗೋಚರವಾದ ಬೇವರಿನ ಒದ್ದೆತನವಾಗಿ, ಮಗಳ ದೇಹದೊಳಗೆ ಹನಿಹನಿಯಾಗಿ ಸೇರುತ್ತಿರುವ ಜೀವ ಉಳಿಸುವ ಅಮೃತವಾಗಿ ನನ್ನ ಅನುಭವಕ್ಕೆ ಬಂತು. ಈ ಅನುಬವ ಶರೀರಶಾಸ್ತ್ರ ಪುಸ್ತಕದ ರಕ್ತವೆಂಬ ಅಧ್ಯಾಯದಲ್ಲಿ ವರ್ಣೀತವಾದದ್ದರಿಂದ ತೀರ ಬಿನ್ನವಾದದ್ದು’. ಈ ಹೇಳಿಕೆ ಯಶವಂತ ಚಿತ್ತಾಲರ ಸಮಗ್ರ ಬರವಣಿಗೆಗೆ ಬರೆದ ಮುನ್ನುಡಿಯಂತೆ ಭಾಸವಾಗುತ್ತದೆ. ಚಿತ್ತಾಲರ ಕತೆ, ಕಾದಂಬರಿಗಳಲ್ಲಿ ತಿಳುವಳಿಕೆಯೊಂದಿಗೆ (ಜ್ಞಾನವೆಂದೂ ಕರೆಯಬಹುದು) ಅವರ ಬದುಕಿನ ಸಮಗ್ರ ಅನುಭವವೂ ದಟ್ಟವಾಗಿದೆ. ಹೀಗೆ ಜ್ಞಾನ ಮತ್ತು ಅನುಭವ ಎರಡನ್ನೂ ಎರಕಹೊಯ್ದು ರಚಿಸಿದ ‘ಶಿಕಾರಿ’ ಕಾದಂಬರಿ ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳಲ್ಲೊಂದು.

     1979 ರಲ್ಲಿ ಪ್ರಕಟವಾದ ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ಇದುವರೆಗು 9 ಮುದ್ರಣಗಳನ್ನು ಕಂಡಿದ್ದು ಕಾದಂಬರಿಯ ಜನಪ್ರಿಯತೆಯನ್ನು ಸೂಚಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ವರ್ಧಮಾನ ಪ್ರಶಸ್ತಿ ಪಡೆದ ಹೆಗ್ಗಳಿಕೆ ‘ಶಿಕಾರಿ’ ಕಾದಂಬರಿಯದು. ಇದು ಚಿತ್ತಾಲರ ಎರಡನೆ ಕಾದಂಬರಿ. ಸಂಖ್ಯಾ ದೃಷ್ಟಿಯಿಂದ ಚಿತ್ತಾಲರು ಬರೆದ ಕಾದಂಬರಿಗಳ ಸಂಖ್ಯೆ ತುಂಬ ಕಡಿಮೆ. ಅವರು ಬರೆದಿರುವುದು ಕೇವಲ ಐದು ಕಾದಂಬರಿಗಳು ಮಾತ್ರ. ಆದರೆ ಗುಣಾತ್ಮಕವಾಗಿ ಚಿತ್ತಾಲರ ಕಾದಂಬರಿಗಳಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಠ ಸ್ಥಾನವಿದೆ. ಮನುಷ್ಯನ ಗುಣ ಸ್ವಭಾವಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡಿದಷ್ಟು ಬೇರೆ ಬರಹಗಾರರು ನೋಡಿದ್ದು ಕಡಿಮೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಾಗಲಾರದು. 

      ಚಿತ್ತಾಲರ ಒಟ್ಟು ಬರವಣಿಗೆಯ ಸಾರ್ಥಕತೆ ಇರುವುದು ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವಲ್ಲಿ. ಅವರ ಕತೆ, ಕಾದಂಬರಿಗಳ ನಾಯಕ ನಾಯಕಿಯರು ಮಾನವೀಯ ಪ್ರೀತಿ, ಅಂತ:ಕರಣಗಳನ್ನು ಹುಡುಕುತ್ತ ಅಲೆಯುವುದು ಸಹಜವೆಂಬತೆ ಚಿತ್ರಿತವಾಗಿದೆ. ಚಿತ್ತಾಲರು ಸೃಷ್ಟಿಸಿದ ಕಥಾನಾಯಕ ಝೋಪಡಪಟ್ಟಿಗಳಲ್ಲಿ, ಹೂ ಮಾರುವ ಬಾಲಕಿಯಲ್ಲಿ, ರಸ್ತೆ ಬದಿಯಲ್ಲಿನ ನಿರ್ಗತಿಕರಲ್ಲಿ ಹೀಗೆ ತನಗೆ ಎದುರಾದ ಪ್ರತಿಯೊಬ್ಬರ ಮುಖದಲ್ಲಿ ಕಾಣುವ ಮನುಷ್ಯ ಪ್ರೇಮಕ್ಕಾಗಿ ಹಂಬಲಿಸುತ್ತಾನೆ. ಮನುಷ್ಯತ್ವದ ಹುಡುಕಾಟ ಚಿತ್ತಾಲರ ಬರವಣಿಗೆಯ ಪ್ರಧಾನ ನೆಲೆಯೂ ಹೌದು. ಮನುಷ್ಯತ್ವದ ಹುಡುಕಾಟವನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಬರವಣಿಗೆಯನ್ನು ರೂಪಿಸಿಕೊಂಡ ಚಿತ್ತಾಲರು ಸಾಹಿತ್ಯದ ಮಹತ್ವವನ್ನು ಹೇಳುವುದು ಹೀಗೆ ‘ಸಾಹಿತ್ಯದ ಮುಖಾಂತರ ನಾವು ಮೊದಲಿನಿಂದಲೂ ತೊಡಗಿಸಿಕೊಂಡದ್ದು ಮನುಷ್ಯರಾಗಿ ಅರಳುವ ಪ್ರಕ್ರಿಯೆಯಲ್ಲಿ ಎನ್ನುವ ನಂಬಿಕೆ ನನ್ನದು. ಇಂದಿನ ಸಮಾಜದಲ್ಲಿ ನಾವು ಮನುಷ್ಯರಾಗಿ ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು. ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇ ಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವುಗಳಾಗಿವೆ. ಸಾಹಿತ್ಯ ಹೃದಯವುಳ್ಳ ಹಾದಿಯಾಗಿದೆ ಎನ್ನುವ ನಂಬಿಕೆಯಿಂದಲೇ ಓದುವ ಮತ್ತು ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ’. 

       ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳುವಂತೆ ‘ಶಿಕಾರಿ’ ಕಾದಂಬರಿಯ ಕೇಂದ್ರ ಪ್ರತಿಮೆ ಬೇಟೆ. ಇಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು ಪಕ್ಷಿಗಳ ಬೇಟೆಯಾಗಿರದೆ ಮನುಷ್ಯನಿಂದ ಮನುಷ್ಯನ ಬೇಟೆಯಾಗಿದೆ. ಉತ್ತರ ಕನ್ನಡದ ಹನೇಹಳ್ಳಿಯ ನಾಗಪ್ಪ ‘ಶಿಕಾರಿ’ ಕಾದಂಬರಿಯ ಕಥಾನಾಯಕ. ಈಗ ಮುಂಬಯಿಯಲ್ಲಿ ನೆಲೆ ನಿಂತಿರುವ ನಾಗಪ್ಪ ತನ್ನ ಔದ್ಯೋಗಿಕ ವಲಯದಲ್ಲಿ ಎಲ್ಲರಿಗೂ ನಾಗನಾಥ್ ಎಂದೇ ಚಿರಪರಿಚಿತ. ಕೆಮಿಕಲ್ ಫ್ಯಾಕ್ಟರಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನಾಗಪ್ಪ ಬಡ್ತಿಹೊಂದಿ ಇನ್ನೇನು ಅಮೆರಿಕಾಗೆ ಹೋಗಬೇಕೆನ್ನುವ ಘಳಿಗೆಯಲ್ಲಿ ಫ್ಯಾಕ್ಟರಿಯ ಉನ್ನತವಲಯದ ಪಿತೂರಿಗೆ ಒಳಗಾಗಿ ಎರಡು ತಿಂಗಳುಗಳ ಕಾಲ ಕೆಲಸದಿಂದ ವಜಾಗೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಹೈದರಾಬಾದಿನಿಂದ ಮುಂಬಯಿಗೆ ವರ್ಗವಾಗಿ ಬರುವ ನಾಗಪ್ಪನಿಗೆ ಆಡಳಿತ ಮಂಡಳಿ ಎರಡು ತಿಂಗಳು ರಜಾ ನೀಡಿ ತನಿಖೆಯನ್ನು ಎದುರಿಸುವಂತೆ ಆದೇಶಿಸುತ್ತದೆ. ಕಂಪನಿಯ ಡಿ.ಎಮ್.ಡಿ ಫಿರೋಜ್ ಬಂದೂಕವಾಲಾ ವ್ಯವಸ್ಥಿತ ಸಂಚೊಂದನ್ನು ರೂಪಿಸಿ ನಾಗಪ್ಪನನ್ನು ಬಲಿಪಶುವನ್ನಾಗಿಸಲು ಪ್ರಯತ್ನಿಸುತ್ತಾನೆ. ಕಂಪನಿಯಲ್ಲಿ ಕಳ್ಳತನವಾದ ಸರಕು ಆಕಸ್ಮಿಕ ಬೆಂಕಿ ಅಪಘಾತದಲ್ಲಿ ಸುಟ್ಟು ಹೋಯಿತೆನ್ನುವ ವರದಿಯನ್ನು ಸಿದ್ಧಪಡಿಸಿ ಅದಕ್ಕೆ ನಾಗಪ್ಪನ ರುಜು ಪಡೆಯುವ ಕಾರ್ಯತಂತ್ರವನ್ನು ರೂಪಿಸುವ ಫಿರೋಜ್ ಬಂದೂಕವಾಲಾ ತನ್ನ ಕಾರ್ಯತಂತ್ರದಲ್ಲಿ ಯಶಸ್ವಿಯಾಗಲು ನಾಗಪ್ಪನನ್ನು ಮಾನಸಿಕವಾಗಿ ಹಣಿಯುವ ಯೋಜನೆಯನ್ನು ರೂಪಿಸುತ್ತಾನೆ. ಅಂತರ್ಮುಖಿಯು ಮತ್ತು ಭಾವಜೀವಿಯೂ ಆದ ನಾಗಪ್ಪ ನೌಕರಿಯಿಂದ ವಜಾಗೊಂಡ ಅವಧಿಯಲ್ಲಿ ಅನುಭವಿಸುವ ಒಟ್ಟು ಮಾನಸಿಕ ಕ್ಷೋಭೆ ಕಾದಂಬರಿಯ ಕೇಂದ್ರವಸ್ತು. ಬಾಲ್ಯದಲ್ಲೇ ಕಂಡ ಅಮ್ಮನ ಸಾವು, ಓಡಿಹೋದ ಅಣ್ಣ, ಸಂತೆಯಲ್ಲಿ ಕಳೆದುಹೋದ ತಂಗಿ, ಅಪ್ಪ ಹಚ್ಚಿದ ಬೆಂಕಿಯಿಂದ ಎದೆ ಮತ್ತು ಹೊಟ್ಟೆಯ ಮೇಲೆ ಉಳಿದ ಸುಟ್ಟ ಕಲೆಗಳು, ಅಪ್ಪನ ಆತ್ಮಹತ್ಯೆ ಈ ಎಲ್ಲ ಕಹಿ ಘಟನೆಗಳು ವಾಸ್ತವವನ್ನು ಎದುರಿಸಲಾರದಷ್ಟು ನಾಗಪ್ಪನನ್ನು ಪುಕ್ಕಲನನ್ನಾಗಿಸಿವೆ. ‘ತಾನು ಅನುಭವವನ್ನು ಸ್ವೀಕರಿಸುವ ಒಟ್ಟು ರೀತಿಯನ್ನು ನಿರ್ಧರಿಸಿದ್ದೇ ತಾನು ಹನೇಹಳ್ಳಿಯಲ್ಲಿ ಕಳೆದ ಬಾಲ್ಯದ ದಿನಗಳೆಂದು ನಾಗಪ್ಪನಿಗೆ ಅನಿಸುತ್ತದೆ’ ಎನ್ನುವ ಚಿತ್ತಾಲರು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ತಮ್ಮ ಹುಟ್ಟೂರಾದ ಹನೇಹಳ್ಳಿಗೆ ಮರಳುತ್ತಾರೆ. ಹನೇಹಳ್ಳಿ ಮತ್ತು ಅಲ್ಲಿನ ಮನುಷ್ಯರನ್ನು ಚಿತ್ತಾಲರು ಹಟಕ್ಕೆ ಬಿದ್ದವರಂತೆ ತಮ್ಮ ಕತೆ, ಕಾದಂಬರಿಗಳಲ್ಲಿ ಮತ್ತೆ ಮತ್ತೆ ಮರುಹುಟ್ಟು ನೀಡಲು ಪ್ರಯತ್ನಿಸುವುದು ಅವರ ಸಾಹಿತ್ಯ ಕೃತಿಗಳನ್ನು ಓದಿದ ಓದುಗರ ಅನುಭವಕ್ಕೆ ಬರುವ ಸಂಗತಿಯಿದು. ಒಂದರ್ಥದಲ್ಲಿ ಸೃಜನಶೀಲ ಸೃಷ್ಟಿಗೆ ಸ್ಪೂರ್ತಿಯ ಸೆಲೆಯಾದ ಹನೇಹಳ್ಳಿಯನ್ನು ಮತ್ತು ಅಲ್ಲಿನ ಮನುಷ್ಯರನ್ನು ಚಿತ್ತಾಲರು ಕೃತಜ್ಞತೆಯಿಂದ ನೆನಪಿಸಿಕೊಳ್ಳುವ ಪರಿಯಿದು. ಚಿತ್ತಾಲರ ಮಾತುಗಳಲ್ಲೇ ಹೇಳುವುದಾದರೆ ‘ಉತ್ತರ ಕನ್ನಡ ಜಿಲ್ಲೆ ಮತ್ತು ನನ್ನ ಹುಟ್ಟೂರಾದ ಹನೇಹಳ್ಳಿ ಇವು ನನ್ನ ಮಟ್ಟಿಗೆ ಬರೀ ನೆಲದ ಹೆಸರುಗಳಲ್ಲ. ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆಯಾಗಿ ನಿಂತ ಮೂಲಭೂತವಾದ ಪ್ರೇರಕ ಶಕ್ತಿಗಳಾಗಿವೆ. ನನ್ನ ಮಾನಸಿಕ ಪ್ರಪಂಚದ ಭಾವ ಪ್ರತಿಮೆಗಳ ರಚನಾ ವಿನ್ಯಾಸವನ್ನು ಭಾವನೆಗಳ ಶಿಲ್ಪವನ್ನು ರೂಪಿಸಿದ ಉತ್ತುಮಿ, ಗಿರಿಯಣ್ಣ, ಬೊಮ್ಮಿ, ಬುಡಣಸಾಬ, ಎಂಕು ಇವರೆಲ್ಲ ಈ ನೆಲದವರು. ನಾನು ನನ್ನ ಹಳ್ಳಿಯನ್ನು ಬಿಟ್ಟು 36 ವರ್ಷಗಳಾದರೂ ಈಗಲೂ ಮುಂಬಯಿಯಲ್ಲಿ ಕುಳಿತು ಬರೆದ ನನ್ನೆಲ್ಲ ಕತೆ, ಕಾದಂಬರಿಗಳಲ್ಲಿ ನನ್ನ ಹನೇಹಳ್ಳಿ ಮತ್ತೆ ಮತ್ತೆ ಕಾಣಿಸಿಕೊಂಡಿದೆ’. 

      ಕಾದಂಬರಿಯಲ್ಲಿನ ಪ್ರತಿಯೊಂದು ಪಾತ್ರ ನಾಗಪ್ಪನ ಸಂಪರ್ಕಕ್ಕೆ ಬಂದೋ ಇಲ್ಲವೆ ಆತನ ಸ್ವಗತದಲ್ಲೋ ತೆರೆದುಕೊಳ್ಳುತ್ತ ಹೋಗುವುದು ಕಾದಂಬರಿಯ ವೈಶಿಷ್ಠ್ಯತೆಗಳಲ್ಲೊಂದು. ಚಿತ್ತಾಲರು ತಮ್ಮ ಅನುಭವ ಮತ್ತು ಮನೋವಿಜ್ಞಾನದ ಕುರಿತಾದ ತಮ್ಮ ತಿಳುವಳಿಕೆಯನ್ನು ಕಾದಂಬರಿಗೆ ಪೂರಕವಾಗಿ ಅತ್ಯಂತ ಸಮರ್ಥವಾಗಿ ದುಡಿಸಿಕೊಂಡಿರುವರು. ಪರಿಸ್ಥಿತಿಯನ್ನು ಎದುರಿಸುವಲ್ಲಿ ಅಸಮರ್ಥನಾಗುವ ಸಂದರ್ಭಗಳಲ್ಲೆಲ್ಲ ನಾಗಪ್ಪ ತನ್ನ ವ್ಯಕ್ತಿತ್ವವನ್ನು ತಾನೇ ವಿಶ್ಲೇಷಿಸಿಕೊಳ್ಳುವುದು ಮತ್ತು ಕಾದಂಬರಿಯ ಕಥಾನಾಯಕನನ್ನು ಸಾಧಾರಣ ಮನುಷ್ಯನಂತೆ ಚಿತ್ರಿಸಿರುವುದು ಚಿತ್ತಾಲರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ‘ತನ್ನ ಭಯವನ್ನು ಮರೆತು ಇವರಿಬ್ಬರ ಭಯದ ಮೂಲವನ್ನು ಅರಿಯುವ ಕುತೂಹಲ ಸುಖದಾಯಕವೆನಿಸಿತು ನಾಗಪ್ಪನಿಗೆ’ ಎನ್ನುವ ಈ ಸಣ್ಣ ಹೇಳಿಕೆ ನಾಗಪ್ಪನ ಇಡೀ ವ್ಯಕ್ತಿತ್ವವನ್ನು ಸಮಗ್ರವಾಗಿ ಕಟ್ಟಿಕೊಡುತ್ತದೆ. 

      ಕಾದಂಬರಿಯ ಬರವಣಿಗೆಗಾಗಿ ಎರಡು ತಿಂಗಳ ರಜೆ ಪಡೆದಿರುವುದಾಗಿ ಸುಳ್ಳು ಹೇಳಿದ ಕ್ಷಣದಿಂದಲೇ ನಾಗಪ್ಪನನ್ನು ಹಣಿಯಬೇಕೆನ್ನುವ ಪಿತೂರಿಗೆ ಮತ್ತಷ್ಟು ಬಲ ತುಂಬಿಕೊಳ್ಳುತ್ತದೆ. ಬರೆಯುತ್ತಿರುವ ಕಾದಂಬರಿಗೆ ವಾಸ್ತವಿಕ ನೆಲೆಗಟ್ಟು ಒದಗಿಸಲು ತಾನು ಈ ಖೇತವಾಡಿಯ ಚಾಳಿನಲ್ಲಿ ವಾಸಿಸಲು ಬಂದಿರುವುದಾಗಿ ಹೇಳಿದ ಆ ಕ್ಷಣ ನಾಗಪ್ಪನ ಬದುಕಿನಲ್ಲಿ ಅವನಿಗೆ ಗೊತ್ತಿಲ್ಲದಂತೆ ದೊಡ್ಡ ಸಮಸ್ಯೆಯೊಂದು ಪ್ರವೇಶ ಪಡೆಯುತ್ತದೆ. ನಾಗಪ್ಪ ಈಗ ವಾಸಿಸುತ್ತಿರುವ ಖೇತವಾಡಿಯ ಖೇಮರಾಜ ಭವನದ ಮೂರನೇ ಮಜಲಿನ ಈ ಮನೆಯಲ್ಲೇ ಇಪ್ಪತ್ತು ವರ್ಷಗಳ ಹಿಂದೆ ಶ್ರೀನಿವಾಸನ ಪ್ರೇಯಸಿ ನೇತ್ರಾವತಿ ಆತ್ಮಹತ್ಯೆ ಮಾಡಿಕೊಂಡದ್ದು. ಹನೇಹಳ್ಳಿಯವನಾದ ಶ್ರೀನಿವಾಸನಿಗೆ ಈಗ ಮುಂಬಯಿಯ ತನ್ನ ಜಾತಿಯ ಸಮಾಜದಲ್ಲಿ ಒಂದು ಪ್ರತಿಷ್ಠೆ ಗೌರವವಿದೆ. ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಎಂಥ ಕೀಳುಮಟ್ಟಕ್ಕೂ ಇಳಿಯುವ ಶ್ರೀನಿವಾಸನಿಗೆ ನಾಗಪ್ಪ ಬರೆಯುತ್ತಿರುವ ಕಾದಂಬರಿಯಿಂದ ಸಮಾಜದಲ್ಲಿ ತನ್ನ ಗೌರವ ಮಣ್ಣು ಪಾಲಾಗಲಿದೆ ಎನ್ನುವ ಆತಂಕ ಕಾಡಲಾರಂಭಿಸಿದೆ. ನಾಗಪ್ಪನ ಗೌರವವನ್ನು ಹಾಳುಗೆಡುವುವ ಉದ್ದೇಶದಿಂದ ಫಿರೋಜ್ ಬಂದೂಕವಾಲಾನ ಪಿತೂರಿಗೆ ಕೈಜೋಡಿಸುವ ಶ್ರೀನಿವಾಸ ಕಂಪನಿಗೆ ನಾಗಪ್ಪನ ಬಾಲ್ಯದ ಕಹಿ ಘಟನೆಗಳ ಮಾಹಿತಿಯನ್ನು ಒದಗಿಸುತ್ತಾನೆ. ನಾಗಪ್ಪನನ್ನು ಆತನ ವೈಯಕ್ತಿಕ ಬದುಕಿನ ಘಟನೆಗಳಿಂದ ಹಣಿಯಲು ಫಿರೋಜನಿಗೆ ಸೂಕ್ತ ಆಧಾರವೊಂದು ದೊರೆಯುತ್ತದೆ. ಫಿರೋಜನ ಈ ಸಂಚಿನಲ್ಲಿ ನಾಗಪ್ಪನ ಸ್ನೇಹಿತರಾದ ಸೀತಾರಾಮ್, ಅರ್ಜುನ ರಾವ್, ನಾಯಕ್, ಮೇರಿ ಕೂಡ ಶಾಮಿಲಾಗುತ್ತಾರೆ. ಹೀಗೆ ಇಡೀ ವ್ಯವಸ್ಥೆ ತನ್ನನ್ನು ಬಲಿಪಶುವನ್ನಾಗಿಸಲು ಸಂಚು ರೂಪಿಸುತ್ತಿದೆ ಎನ್ನುವ ಮಾನಸಿಕ ಕ್ಷೋಭೆಗೆ ಒಳಗಾಗುವ ನಾಗಪ್ಪ ಎದುರಾಗುವ ಪ್ರತಿಯೊಬ್ಬರನ್ನು ಅನುಮಾನ ಮತ್ತು ಸಂದೇಹದಿಂದ ನೋಡಲಾರಂಭಿಸುತ್ತಾನೆ. ತೊಂಬತ್ತು ವರ್ಷ ವಯಸ್ಸಿನ ಮಾಂಸದ ಮುದ್ದೆಯಂತಾಗಿರುವ ಪದ್ದಕ್ಕನನ್ನು (ಶ್ರೀನಿವಾಸನ ತಾಯಿ) ನೋಡಿದಾಗ ಸಾಯಲು ಹೊರಟವಳಲ್ಲೂ ಕೊಲ್ಲುವ ಛಲದ ಪ್ರವೃತ್ತಿ ಇನ್ನು ಜೀವಂತವಾಗಿರಬಹುದೆಂಬ ಗುಮಾನಿಯಿಂದ ನಾಗಪ್ಪ ದಿಗ್ಭ್ರಮೆಗೊಳಗಾಗುತ್ತಾನೆ. ಹೀಗೆ ಎಲ್ಲರನ್ನೂ ಸಂಶಯದಿಂದ ನೋಡುವ ನಾಗಪ್ಪ ಚಿತ್ತಾಲರ ‘ಮೂರು ದಾರಿಗಳು’ ಕಾದಂಬರಿಯ ಮಂಜುನಾಥನ ಈ ಮಾತುಗಳನ್ನು ನೆನಪಿಗೆ ತರುವಂತೆ ಭಾಸವಾಗುತ್ತದೆ ‘ಒಂದಿಬ್ಬರಿಂದ ಹುಟ್ಟಿದ ಭೀತಿ ಬೆಳೆಯುತ್ತ ಹೋದಂತೆ ನಮ್ಮ ಭೀತಿಗೆ ನಿಜವಾದ ಕಾರಣರಾದವರು ಯಾರು ಎನ್ನುವುದು ಮರೆತು ಹೋಗಿ ಇಡೀ ಕೇರಿ, ಇಡೀ ಊರು ಕೊನೆಗೆ ಇಡೀ ಜಗತ್ತೇ ನಮ್ಮನ್ನು ದ್ವೇಷಿಸುತ್ತಿದೆ ಎನ್ನುವ ಭಾವನೆ ಮೂಡಲಾರಂಭಿಸುತ್ತದೆ’. 

         ಸನ್ನಿವೇಶದಿಂದ ಸನ್ನಿವೇಶಕ್ಕೆ ಗಟ್ಟಿಯಾಗುತ್ತ ಹೋಗುವ ನಾಗಪ್ಪ ಕಾದಂಬರಿಯ ಅಂತ್ಯದಲ್ಲಿ ತನಿಖಾ ಸಮಿತಿಯ ಎದುರು ಹಾಜರಾಗಿ ಇಡೀ ಪಿತೂರಿ ಹೇಗೆ ರೂಪುಗೊಂಡಿತು ಎನ್ನುವುದನ್ನು ಸಮಿತಿಯ ಸದಸ್ಯರಿಗೆ ವಿವರಿಸುವಲ್ಲಿ ಯಶಸ್ವಿಯಾದರೂ  ಪಿತೂರಿ ಹೂಡಿದವರ ತಣ್ಣನೆಯ ಕ್ರೌರ್ಯದ ಎದುರು ಸೋಲುತ್ತಾನೆ. ಕಂಪನಿಯು ಒಡ್ಡುವ ಎಲ್ಲ ಪ್ರಲೋಭನೆಗಳನ್ನು ಪಕ್ಕಕ್ಕೆ ತಳ್ಳಿ ನೌಕರಿಗೆ ರಾಜೀನಾಮೆ ನೀಡಿ ಹೊರಬರುವ ನಾಗಪ್ಪನಿಗೆ ಕಳೆದುಹೋದ ಅಣ್ಣ ಮತ್ತು ತಂಗಿಯನ್ನು ಹುಡುಕುವುದೇ ಬದುಕಿನ ಅಂತಿಮ ಗುರಿಯಾಗುತ್ತದೆ. ಬದುಕಿನ ಎಲ್ಲ ದ್ವಂದ್ವ, ತಲ್ಲಣ, ಕ್ಷೋಭೆಗಳಿಂದ ಹೊರಬರುವ ನಾಗಪ್ಪ ಹೀಗೆ ನುಡಿಯುತ್ತಾನೆ ‘ಕ್ಷಮಿಸು ಮೇರಿ ಕಳೆದ ಎಂಟು ದಿನಗಳಿಂದ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ ನೋಡು. ಈ ಹೊತ್ತು ಗಡದ್ದಾಗಿ ನಿದ್ದೆ ಮಾಡಬೇಕು. ಈಗ ನೀನು ತಂದ ಸುದ್ದಿಯಿಂದ ನನಗೆ ಖುಷಿಯಾಗಿಲ್ಲವೆಂದಲ್ಲ ಮೇರಿ ತುಂಬ ಖುಷಿಯಾಗಿದೆ. ಆದರೆ ನೀನು ತಿಳಿದಿರಬಹುದಾದ ಕಾರಣಕ್ಕಾಗಿಯಲ್ಲ. ನಾನು ರಾಜೀನಾಮೆಯನ್ನು ಕೊಟ್ಟಿದ್ದು ಬರೀ ನೌಕರಿಗಲ್ಲ. ಹೀಗೆ ಬರಿಯೇ  ನಮ್ಮ ನಮ್ಮ ಸ್ವಾರ್ಥಕ್ಕಾಗಿ, ಭಯಗಳಿಗಾಗಿ ಒಬ್ಬರನ್ನೊಬ್ಬರು ಉಪಯೋಗಿಸಿಕೊಳ್ಳುವಂತೆ ಮಾಡುವ ಈ ವ್ಯವಹಾರಿಕ ಲೋಕಕ್ಕೆ’. ಈವರೆಗೂ ಕಾಡುತ್ತ ಬಂದ ಭಯ, ಆತಂಕ, ಆಸೆ, ಆಕಾಂಕ್ಷೆ ಮುಂತಾದ ಎಲ್ಲ ಭಾವನೆಗಳನ್ನೂ ಕೆಳಕ್ಕೆ ದೂಡಿ ಬೋರ್ಡಮ್ ತಂತಾನೆ ಮೇಲಕ್ಕೆದ್ದು ಬರಹತ್ತಿದಾಗ ನಾಗಪ್ಪನಿಗೆ ತನಗೆ ಬಂದ ಆಕಳಿಕೆಯನ್ನು ತಡೆಯುವುದು ಕಠಿಣವಾಯಿತು ಈ ಮಾತು ಬದಲಾದ ನಾಗಪ್ಪನ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಇದರೊಂದಿಗೆ ತನ್ನನ್ನು ಬಾಲ್ಯದಿಂದಲೂ ಕಾಡುತ್ತ ಬಂದ ಬೆಂಕಿ ಅಪಘಾತದ ಕಹಿ ನೆನಪಿನಿಂದಲೂ ಹೊರಬರುವ ನಾಗಪ್ಪ ಎದೆ ಹೊಟ್ಟೆಯ ಮೇಲಿನ ಸುಟ್ಟಿದ ಕಲೆಗಳನ್ನು ನೋಡಿಕೊಳ್ಳುವಷ್ಟು ಗಟ್ಟಿಯಾಗುತ್ತಾನೆ. 

ಚಿತ್ತಾಲರು ಧ್ಯಾನಿಸುವ ಸಂಗತಿಗಳು


ಸೃಜನಶೀಲನಾಗುವುದರಲ್ಲಿ ಸೋತಲ್ಲೆಲ್ಲ ಮನುಷ್ಯ ಮನುಷ್ಯನನ್ನೇ ಉಪಯೋಗಿಸಿಕೊಳ್ಳುವ ಕ್ರೂರತೆ ಕಾಣಿಸಿಕೊಳ್ಳುತ್ತದೆ ಎನ್ನುವ ಚಿತ್ತಾಲರು ‘ಶಿಕಾರಿ’ ಕಾದಂಬರಿಯುದ್ದಕ್ಕೂ ಓದುಗನನ್ನು ಒಂದು ರೀತಿಯ ಧ್ಯಾನಸ್ಥ ಸ್ಥಿತಿಗೆ ಒಳಪಡಿಸುತ್ತಾರೆ. ವ್ಯವಹಾರ ಜಗತ್ತಿನ ಅನೇಕ ಗೊಂದಲಗಳ ನಡುವೆ ಮನುಷ್ಯ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿರುವ ನಮ್ಮನ್ನು ಚಿತ್ತಾಲರು ನಾಗಪ್ಪನ ಸಂಕೀರ್ಣ ವ್ಯಕ್ತಿತ್ವದ ಮೂಲಕ ಮರು ಚಿಂತನೆಗೆ ಹಚ್ಚುತ್ತಾರೆ. 
ಒಟ್ಟಾರೆ ಕಾದಂಬರಿಯಲ್ಲಿ ಚಿತ್ತಾಲರು ಧ್ಯಾನಿಸುವ ಸಂಗತಿಗಳು ಹೀಗಿವೆ,
● ಈ ಮನುಷ್ಯನ ವ್ಯವಹಾರ ಜಗತ್ತಿನ ಅಸಹ್ಯವಾದ ಅಂದಗೇಡಿತನದಿಂದ ಮನಸ್ಸು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲೆಂದು ಸೃಜನಶೀಲ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಆ ದೇವರೇ ಕೊಟ್ಟಿರಬೇಕು. ಸಭ್ಯತೆಯ ಮುಖವಾಡದ ಹಿಂದೆ ಎಂತಹ ಕ್ರೌರ್ಯದ ಹಲ್ಲು ಮಸೆತ ನೋಡಿ. 
●  ಮನುಷ್ಯ ನಿಸರ್ಗವನ್ನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಲು ಹತ್ತಿದ ರೀತಿಯಿಂದಾಗಿ ಕಳೆದ ಕೆಲವು ದಶಕಗಳಿಂದ ನಾವು ನಿಸರ್ಗವನ್ನು ನೋಡುವ ದೃಷ್ಟಿಯೇ  ಭ್ರಷ್ಟವಾಗಿ ಬಿಟ್ಟಿದೆ. ಇಂದಿನ ಮನುಷ್ಯ ತಾನೇ ತನ್ನ ಅಹಂಕಾರದ ಮೇಲೆ, ಸ್ವಾರ್ಥದ ಮೇಲೆ ನಿಲ್ಲಿಸಿದ ನಿರ್ಜೀವ ವಸ್ತುಗಳಿಂದಲೇ ಸುತ್ತುವರಿಯಲ್ಪಟ್ಟಿದ್ದಾನೆ. ಆದ್ದರಿಂದಲೇ ತನ್ನೊಬ್ಬನ ಸ್ವಾರ್ಥಕ್ಕಾಗಿ ಮನುಷ್ಯರನ್ನು ನಿರ್ಜೀವ ವಸ್ತುಗಳೇ ಎನ್ನುವ ಹಾಗೆ ಉಪಯೋಗಿಸಿಕೊಳ್ಳಲು ತೊಡಗಿದ್ದಾನೆ.
●  ಮನುಷ್ಯ ಎಷ್ಟೇ ಪ್ರಾವೀಣ್ಯತೆ ಹೊಂದಿದವನಾಗಿದ್ದರೂ ಅವನೊಬ್ಬ ಭಾವನಾಜೀವಿ, ವ್ಯವಹಾರ ಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೇ ಇಡೀ ವ್ಯವಸ್ಥೆ ಅವನನ್ನು ವ್ಯಂಗ್ಯವಾಗಿ ನೋಡಲು ಕಾರಣವಾಗಬಹುದು. 
●  ಪ್ರತಿಯೊಬ್ಬನನ್ನು ಅಪನಂಬಿಕೆಯಿಂದ ನೋಡುವುದೇ ಜಾಣತನವಾದರೆ ಬದುಕಿರಬೇಕು ಎನ್ನುವ ಅಭೀಪ್ಸೆಗೆ ಅರ್ಥವಾದರೂ ಏನು?
●  ಏನಿರದಿದ್ದರೂ ಬದುಕಬಹುದೇನೋ. ಆದರೆ ಪ್ರೀತಿಯಿಲ್ಲದೆ, ಗೆಳತನವಿಲ್ಲದೆ, ಮಾನವೀಯ ಅಂತ:ಕರಣವಿಲ್ಲದೆ, ಸಹಾನುಭೂತಿಯಿಲ್ಲದೆ ಬದುಕುವುದು ಸಾಧ್ಯವೇ ಇಲ್ಲವೇನೋ?

ಕೊನೆಯ ಮಾತು


ನಾಗಪ್ಪ ತನ್ನ ವಿರುದ್ಧ ಪಿತೂರಿ ರೂಪಿಸಿದವರಿಗೆ ಪಾಠ ಕಲಿಸದೆ ನೌಕರಿಗೆ ರಾಜೀನಾಮೆ ನೀಡಿ ಕಂಪನಿಯಿಂದ ಹೊರಬರುವುದು ಕಾದಂಬರಿಯ ಕಥಾನಾಯಕನ ಸೋಲು ಎಂದೆನಿಸಿದರೂ ಬೇರೊಂದು ರೀತಿಯಲ್ಲಿ ಲೇಖಕರ ಆಶಯ ಇಡೇರಿದೆ. ತನ್ನನ್ನು ಕಾಡುತ್ತಿರುವ ಎಲ್ಲ ದ್ವಂದ್ವಗಳಿಂದ ಬಿಡುಗಡೆ ಪಡೆಯುವ ನಾಗಪ್ಪ ಹೊಸ ಮನುಷ್ಯನಾಗಿ ಮತ್ತೆ ಮರುಹುಟ್ಟು ಪಡೆಯುವುದು ಚಿತ್ತಾಲರ ದೃಷ್ಟಿಯಲ್ಲಿ (ಓದುಗರ ದೃಷ್ಟಿಯಲ್ಲಿ ಕೂಡ) ಅದು ನಾಗಪ್ಪನ ನಿಜವಾದ ಗೆಲುವಾಗಿ ಪರಿಣಮಿಸುತ್ತದೆ. ಚಿತ್ತಾಲರ ಕತೆ, ಕಾದಂಬರಿಗಳ ನಾಯಕರು ವ್ಯವಹಾರಿಕ ಬದುಕಿನಲ್ಲಿ ಸೋಲನ್ನನುಭವಿಸಿದರೂ ವೈಯಕ್ತಿಕ ಬದುಕಿನಲ್ಲಿ ಗೆಲುವು ಸಾಧಿಸುವುದು ಅವರ ಒಟ್ಟು ಬರವಣಿಗೆಯ ಪ್ರಧಾನ ನೆಲೆಯಾಗಿದೆ. ಈ ಸಂದರ್ಭ ಕತೆಗಾರ ಎಸ್.ದಿವಾಕರ ಅವರ ಹೇಳಿಕೆಯೊಂದಿಗೆ ಲೇಖನಕ್ಕೊಂದು ತಾರ್ಕಿಕ ಅಂತ್ಯವನ್ನು ಕೊಡಲು ನಾನು ಬಯಸುತ್ತೇನೆ, ‘ಮಾನವತಾವಾದಿಯಾದ ಯಶವಂತ ಚಿತ್ತಾಲರು ತಮ್ಮ ಕಥಾನಾಯಕರ ಸೋಲುಗಳಿಗೂ ಘನತೆ ತಂದು ಕೊಡುತ್ತಾರೆ. ಕಥೆ, ಕಾದಂಬರಿಗಳಲ್ಲಿ ನಾವು ಸೋಲರಿಯದ ಮಹಾ ನಾಯಕರನ್ನು ಅಪೇಕ್ಷಿಸುತ್ತೇವೆ. ಅಂಥ ನಾಯಕರು ನಮ್ಮ ಭ್ರಮಾಲೋಕವನ್ನು ಮೂರ್ತಗೊಳಿಸಬೇಕೆಂದು ಹಟ ಹಿಡಿಯುತ್ತೇವೆ. ಆದ್ದರಿಂದ ನಮ್ಮ ಕನಸಿನ ನಾಯಕರು ನಮ್ಮಂತೆಯೇ  ಮನುಷ್ಯರಾಗಿ ಮನುಷ್ಯ ಸಹಜ ಸೋಲುಗಳಿಗೆ ಗುರಿಯಾದಾಗ ನಮಗೆ ನಿರಾಶೆಯಾಗುತ್ತದೆ. ಆದರೆ ಚಿತ್ತಾಲರ ಕಥೆಗಳಲ್ಲಿ ಮನುಷ್ಯ ಮನುಷ್ಯನಿಗೆ ತೋರಿಸಬೇಕಾದ ಪ್ರೀತಿಯೇ  ಮೇಲುಗೈಯಾಗುವುದರಿಂದ ಅಲ್ಲಿ ಸೋಲುಗಳಿಗೂ ಬೆಲೆಯಿದೆ. ಒಟ್ಟಾರೆ ಚಿತ್ತಾಲರ ಕೃತಿಗಳಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ’. 

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


1 comment: